ಹೈದರಾಬಾದ್: ಅಲ್ಪಸಂಖ್ಯಾತರನ್ನು ಹೇಗೆ ನಡೆಸಿಕೊಳ್ಳಬೇಕೆಂದು ಭಾರತಕ್ಕೆ ನಾವು ಕಲಿಸುತ್ತೇವೆ ಎಂದಿದ್ದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ಹೇಳಿಕೆಗೆ ಎಐಎಂಐಎಂ ನಾಯಕ ಅಸಾದುದ್ದೀನ್ ಒವೈಸಿ ಅವರು ಸೋಮವಾರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಒವೈಸಿ, ಪಾಕ್ ಸಂವಿಧಾನದ ಪ್ರಕಾರ, ಮುಸ್ಲಿಂ ವ್ಯಕ್ತಿ ಮಾತ್ರವೇ ಅಲ್ಲಿನ ಅಧ್ಯಕ್ಷನಾಗಬಹುದು. ಆದರೆ, ಭಾರತವು ವಿವಿಧ ಧರ್ಮಗಳ ಹಲವು ರಾಷ್ಟ್ರಪತಿಗಳನ್ನು ಕಂಡಿದೆ. ಎಲ್ಲರನ್ನೊಳಗೊಂಡ ರಾಜಕೀಯ ಹಾಗೂ ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ನಮ್ಮಿಂದಲೇ ಖಾನ್ ಸಾಹೇಬ್ ಕಲಿಯುವುದು ಸಾಕಷ್ಟಿದೆ ಮತ್ತು ಕಲಿಯಲು ಇದು ಸರಿಯಾದ ಸಮಯ ಎಂದಿದ್ದಾರೆ.
ಕಳೆದ ಶನಿವಾರ ಇಮ್ರಾನ್ ಖಾನ್ ಅವರು, ಅಲ್ಪಸಂಖ್ಯಾತರನ್ನು ಹೇಗೆ ನಡೆಸಿಕೊಳ್ಳಬೇಕು ಎಂಬುದನ್ನು ನರೇಂದ್ರ ಮೋದಿ ಸರ್ಕಾರಕ್ಕೆ ನಾವು ತೋರಿಸುತ್ತೇವೆ ಎಂದು ಹೇಳಿದ್ದರು.