ನವದೆಹಲಿ: ಕಂಪ್ಯೂಟರ್ ಗಳ ಮಾಹಿತಿ ಮೇಲೆ ನಿಗಾ ವಹಿಸಲು ಕೇಂದ್ರ ಸರ್ಕಾರ ಸಿಬಿಐ, ಇಡಿ ಸೇರಿದಂತೆ 10 ಸಂಸ್ಥೆಗಳಿಗೆ ಅಧಿಕಾರ ನೀಡಿರುವುದನ್ನು ಪ್ರಶ್ನಿಸಿ ಸೋಮವಾರ ಸುಪ್ರೀಂ ಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಸಲ್ಲಿಸಲಾಗಿದೆ.
ಡಿಸೆಂಬರ್ 20ರಂದು 10 ಸಂಸ್ಥೆಗಳಿಗೆ ಅಧಿಕಾರ ನೀಡಿ ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆಯನ್ನು ರದ್ದುಗೊಳಿಸಬೇಕು ಎಂದು ಕೋರಿ ವಕೀಲ ಮನೋಹರ್ ಲಾಲ್ ಶರ್ಮಾ ಅವರು ಸುಪ್ರೀಂ ಕೋರ್ಟ್ ಗೆ ಪಿಐಎಲ್ ಸಲ್ಲಿಸಿದ್ದಾರೆ.
ಸರ್ಕಾರ ಹೊರಡಿಸಿರುವ ಈ ಅಧಿಸೂಚನೆ ಕಾನೂನು ಬಾಹಿರ ಮತ್ತು ಅಸಂವಿಧಾನಿಕ ಎಂದು ಶರ್ಮಾ ಆರೋಪಿಸಿದ್ದಾರೆ.
ಯಾವುದೇ ಕಂಪ್ಯೂಟರ್ ನಲ್ಲಿ ರಚಿತವಾದ, ರವಾನಿಸಲ್ಪಟ್ಟಿರುವ, ಸ್ವೀಕರಿಸಿದ ಅಥವಾ ಸಂಗ್ರಹಿಸಿದ ಮಾಹಿತಿಯ ಮೇಲೆ ನಿಗಾ ವಹಿಸಲು ಕೇಂದ್ರ ಸರ್ಕಾರ 10 ಕೇಂದ್ರೀಯ ಸಂಸ್ಥೆಗಳಿಗೆ ಅಧಿಕಾರ ನೀಡಿದೆ.
ಈ ಸಂಬಂಧ ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಗೌಬಾ ಅವರು ಇಂದು ಆದೇಶ ಹೊರಡಿಸಿದ್ದು, ಗುಪ್ತಚರ ಇಲಾಖೆ, ಮಾದಕದ್ರವ್ಯ ನಿಯಂತ್ರಣ ಮಂಡಳಿ, ರಾಷ್ಟ್ರೀಯ ತನಿಖಾ ಸಂಸ್ಥೆ, ಜಾರಿ ನಿರ್ದೇಶನಾಲಯ, ಕೇಂದ್ರ ನೇರ ತೆರಿಗೆ ಮಂಡಳಿ, ಕಂದಾಯ ಗುಪ್ತಚರ ನಿರ್ದೇಶನಾಲಯ, ಸಿಬಿಐ, ಸಂಪುಟ ಕಾರ್ಯದರ್ಶಿ, ಸಿಗ್ನಲ್ ಗುಪ್ತಚರ ನಿರ್ದೇಶನಾಲಯ(ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ರಾಜ್ಯಗಳಿಗೆ ಮಾತ್ರ) ಮತ್ತು ಪೊಲೀಸ್ ಆಯುಕ್ತರಿಗೆ ಅಧಿಕಾರಿ ನೀಡಲಾಗಿದೆ. ಇದಕ್ಕೆ ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಎಡಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.