ದೇಶ

ತ್ರಿವಳಿ ತಲಾಕ್‌ ಚರ್ಚೆ: ಸಂವಿಧಾನದಂತೆ ಸರ್ಕಾರ ನಡೆಯುತ್ತಿದೆ, ಶರಿಯಾ ಕಾನೂನಿನಂತಲ್ಲ- ಕೇಂದ್ರ ಸಚಿವ ನಖ್ವಿ

Lingaraj Badiger
ನವದೆಹಲಿ: ಇತ್ತೀಚಿಗೆ ಕೆಲವು ಜನ ಫತ್ವಾ ಅಂಗಡಿಗಳನ್ನೇ ತೆರೆದಿದ್ದಾರೆ. ಆದರೆ ದೇಶ ಸಂವಿಧಾನದ ಆಧಾರದ ಮೇಲೆ ನಡೆಯುತ್ತಿದೆ. ಶರಿಯಾ ಕಾನೂನಿನಂತೆ ನಡೆಯುತ್ತಿಲ್ಲ ಎಂದು ಕೇಂದ್ರ ಅಲ್ಪ ಸಂಖ್ಯಾತ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಅವರು ಗುರುವಾರ ಹೇಳಿದ್ದಾರೆ.
ಲೋಕಸಭೆಯಲ್ಲಿ ಇಂದು ತ್ರಿವಳಿ ತಲಾಕ್ ಕುರಿತು ಬಿಸಿ ಬಿಸಿ ಚರ್ಚೆ ನಡೆಯುತ್ತಿದ್ದು, ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ನಖ್ವಿ, ಮುಸ್ಲಿಂ ಮಹಿಳೆಯರ ಹಕ್ಕು ರಕ್ಷಣೆಗೆ ಈ ಸರ್ಕಾರ ಬದ್ಧವಾಗಿದೆ. ಶರಿಯಾ ಕಾನೂನಿನಲ್ಲೂ ತ್ರಿವಳಿ ತಲಾಕ್ ಅವಕಾಶ ಇಲ್ಲ. ಹೀಗಾಗಿ ತ್ರಿವಳಿ ತಲಾಕ್ ನಿಶೇಧಿಸಲಾಗುತ್ತಿದೆ. ಈ ಸಂಬಂಧ ನಾನು ಪ್ರಧಾನಿ ನರೇಂದ್ರ ಮೋದಿ ಮತ್ತು ರವಿಶಂಕರ್ ಪ್ರಸಾದ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ತ್ರಿವಳಿ ತಲಾಕ್‌ ಮಸೂದೆಯನ್ನು ಸಂಸತ್ತಿನ ಜಂಟಿ ಆಯ್ಕೆ ಸಮಿತಿಗೆ ಒಪ್ಪಿಸಬೇಕೆಂದು ಪ್ರತಿಪಕ್ಷಗಳು ಆಗ್ರಹಿಸಿದವು. ಅಲ್ಲದೇ ಮಸೂದೆ ಜಾರಿಯಿಂದಾಗಿ ಮುಸ್ಲಿಂ ಪುರುಷರನ್ನು ದಂಡಿಸಬಹುದೇ ಹೊರತು, ಯಾವುದೇ ಕಾರಣಕ್ಕೂ ಇದರಿಂದ ಮಹಿಳಾ ಸಬಲೀಕರಣ ಸಾಧ್ಯವಿಲ್ಲ ಎಂದು ಕಾಂಗ್ರೆಸ್​ ಸಂಸದೆ ಸುಷ್ಮಿತಾ ದೇವ್​​ ಅವರು ಹೇಳಿದರು.
ತ್ರಿವಳಿ ತಲಾಖೆ ಮಸೂದೆಯಲ್ಲಿ ಕೆಲವು ಅಂಶಗಳು ಅಸಾಂವಿಧಾನಿಕವಾಗಿವೆ. ಈ ಕರಡು ಕಾನೂನನ್ನು ಇನ್ನಷ್ಟು ಆಳವಾಗಿ ಅವಲೋಕಿಸಬೇಕಾದ ಅಗತ್ಯವಿದೆ. ಹೀಗಾಗಿ ಮುಸ್ಲಿಂ ಮಹಿಳೆಯರ ವೈವಾಹಿಕ ಹಕ್ಕುಗಳ ರಕ್ಷಣೆ ಮಸೂದೆ (ತ್ರಿವಳಿ ತಲಾಕ್‌ ಮಸೂದೆ) ಯನ್ನು ಎರಡೂ ಸದನಗಳ ಜಂಟಿ ಆಯ್ಕೆ ಸಮಿತಿಗೆ ಉಲ್ಲೇಖಿಸಬೇಕು. ಇದರಲ್ಲಿ ಒಳಗೊಂಡಿರುವ ಅಸಾಂವಿಧಾನಿಕ ಅಂಶಗಳನ್ನು ಮತ್ತೊಮ್ಮೆ ಅವಲೋಕಿಸಬೇಕೆಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದರು.
ಎಐಎಡಿಎಂಕೆ ನಾಯಕ ಪಿ ವೇಣುಗೋಪಾಲ್‌, ಟಿಎಂಸಿ ಸದಸ್ಯ ಸುದೀಪ್‌ ಬಂದೋಪಾಧ್ಯಾಯ, ಎಐಎಂಐಎಂ ನ ಅಸಾದುದ್ದೀನ್‌ ಓವೈಸಿ ಮತ್ತು ಎನ್‌ಸಿಪಿಯ ಸುಪ್ರಿಯಾ ಸುಳೆ ಅವರು ಕೂಡ ಇದೇ ಆಗ್ರಹವನ್ನು ಮುಂದಿಟ್ಟರು. 
ತ್ರಿವಳಿ ತಲಾಕ್ ಮಸೂದೆ ಮಂಡಿಸಿ ಮಾತನಾಡಿದ ಕೇಂದ್ರ ಕಾನೂನು ಸಚಿವ ರವಿಶಂಕರ್​​ ಪ್ರಸಾದ್​ ಅವರು, ತ್ರಿವಳಿ ತಲಾಕ್‌ ನೀಡುವ, ಮಹಿಳೆಯರ ಮೇಲೆ ಅಪರಾಧ ಎಸಗುವ ಮುಸ್ಲಿಮ್‌ ಪುರುಷನನ್ನು ದಂಡಿಸಬೇಕು. ಇದಕ್ಕೆ ಕಾನೂನಿನಲ್ಲಿ ಅವಕಾಶ ನೀಡಬೇಕು. ಹಾಗೆಯೇ ಮುಸ್ಲಿಂ ಸಮುದಾಯದ ಮಹಿಳಾ ಸಬಲೀಕರಣ ಆಗಬೇಕಿದೆ. ಈ ಕಾರಣದಿಂದಾಗಿ ನಾವು ಈ ಮಸೂದೆ ಮಾಡಲು ಹೊರಟಿದ್ದೇವೆ ಹೊರತು. ಇದರಲ್ಲಿ ಯಾವುದೇ ರಾಜಕೀಯ ಉದ್ದೇಶ ಇಲ್ಲ ಎಂದರು.
SCROLL FOR NEXT