ಮಧುರೈ: ಗರ್ಭಿಣಿ ಮಹಿಳೆಗೆ ಎಚ್ಐವಿ ಸೋಂಕಿತ ರಕ್ತ ದಾನಮಾಡಿ ಬಳಿಕ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಇಂದು ಮುಂಜಾನೆ (ಭಾನುವಾರ) ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.
23 ವರ್ಷ ವಯಸ್ಸಿನ ಗರ್ಭಿಣಿ ಮಹಿಳೆಗೆ ರಕ್ತದಾನ ಮಾಡಿದ್ದ ಈ ಯುವಕ ಎಚ್ಐವಿ ಸೋಂಕಿತನಾಗಿದ್ದು ಈತನ ರಕ್ತ ಪಡೆದಿದ್ದ ಆ ಮಹಿಳೆಗೆ ಸಹ ಸೋಂಕು ಕಾಣಿಸಿಕೊಂಡಿತ್ತು. ಈ ವಿಷಯ ತಿಳಿದಾಗ ಯುವಕ ಕುಪಿತಗೊಂಡು ಆತ್ಮಹತ್ಯೆಗೆ ಯತ್ನಿಸಿದ್ದನು. ಆತನನ್ನು ಮಧುರೈನ ಸರ್ಕಾರಿ ರಾಜಾಜಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮೂರು ದಿನಗಳ ಕಾಲ ಚಿಕಿತ್ಸೆ ಪಡೆದಿದ್ದ ಯುವಕ ಇಂದು ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾನೆ.
ಎಚ್ಐವಿ ಸೋಂಕಿತ ರಕ್ತವನ್ನು ಗರ್ಭಿಣಿ ಮಹಿಳೆಗೆ ವರ್ಗಾಯಿಸುವ ಮೂಲಕ ವೈದ್ಯಕೀಯ ನಿರ್ಲಕ್ಷ ತೋರಿದ್ದ ಘಟನೆ ಬೆಳಕಿಗೆ ಬಂದ ನಂತರ ರಾಮನಾಥಪುರಂ ಜಿಲ್ಲೆಯ ಕಾಮುಧಿ ಪ್ರದೇಶದ ರಕ್ತದಾನಿಯು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದನು.
ಬೆಂಕಿ ಪಟ್ಟಣ ತಯಾರಿಕಾ ಕಾರ್ಖಾನೆಯಲ್ಲಿ ಕಾರ್ಮಿಕನಾಗಿದ್ದ ಯುವಕ ತಾನು ಎಚ್ಐವಿ ಪೀಡಿತನೆಂದು ತಿಳಿದ ಬಳಿಕ ಶಿವಕಾಶಿ ಸರ್ಕಾರಿ ರಕ್ತ ಬ್ಯಾಂಕ್ ಗೆ ತೆರಳಿ ತಾನು ನವೆಂಬರ್ 30 ರಂದು ನೀಡಿದ್ದ ರಕ್ತವನ್ನು ಯಾರಿಗೂ ಮರುಪೂರಣ ಮಾಡದಂತೆ ಮನವಿ ಮಾಡಿದನು. ಏತನ್ಮಧ್ಯೆ, ರಕ್ತವನ್ನು ವಿರುದುನಗರ ಜಿಲ್ಲೆಯ ಸಾತ್ತೂರಿನ ಗರ್ಭಿಣಿ ಮಹಿಳೆಗೆ ನೀಡಲಾಗಿತ್ತು. ವೈದ್ಯಕೀಯ ನಿರ್ಲಕ್ಷದ ವರದಿಗಳು ಮಾದ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ಇತ್ತ ರಕ್ತದಾನಿ ಯುವಕ ಆತ್ಮಹತ್ಯೆ ಯತ್ನ ನಡೆದಿದ್ದನು.
ಘಟನೆ ಸಂಬಂಧ ಸೋಂಕಿತ ಮಹಿಳೆಯ ಪತಿ ಪತ್ರಿಕೆಯೊಡನೆ ಮಾತನಾಡಿದ್ದು ಯುವಕನ ಸಾವಿನ ಕುರಿತು ಆಘಾತ ವ್ಯಕ್ತಪಡಿಸಿದ್ದಾರೆ."ರಕ್ತ ವರ್ಗಾವಣೆ ವಿಚಾರದಲ್ಲಿ ಯುವಕನ ಯಾವುದೇ ದೋಷವಿರಲಿಲ್ಲ.ಅವನು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇ ಇರಲಿಲ್ಲ.ಎಚ್ಐವಿ ಮಾರಕ ರೋಗದ ಬಗ್ಗೆ ತಿಳುವಳಿಕೆ ಕೊಡಲು ನಾವು ಬದ್ದವಾಗಿದ್ದೇವೆ.ಯುವಕನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅವರು ಹೇಳಿದ್ದಾರೆ.