ನವದೆಹಲಿ: ರಾಜ್ಯಸಭೆಯಲ್ಲೂ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಕಾಂಗ್ರೆಸ್ ಮುಕ್ತ ಭಾರತ ಕನಸು ನನ್ನದಲ್ಲ. ಅದು ಮಹಾತ್ಮ ಗಾಂಧಿ ಅವರ ಕನಸು. ಅದನ್ನು ನಾವು ನನಸು ಮಾಡಬೇಕಾಗಿದೆ ಎಂದು ಬುಧವಾರ ಹೇಳಿದ್ದಾರೆ.
ಇಂದು ಬೆಳಗ್ಗೆ ಲೋಕಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ನಂತರ ಮಧ್ಯಾಹ್ನ ರಾಜ್ಯಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಮಹಾತ್ಮ ಗಾಂಧಿ ಅವರು ಸ್ವಾತಂತ್ರ್ಯ ನಂತರ ಕಾಂಗ್ರೆಸ್ ಅನ್ನು ವಿಸರ್ಜಿಸಲು ಬಯಸಿದ್ದರು ಎಂದರು.
ಮಹಾತ್ಮ ಗಾಂಧಿ ಅವರ ಭಾರತ ನಿಮಗೆ ಬೇಕಾಗಿದೆ. ನನಗೂ ಸಹ ಗಾಂಧಿಜೀಯವರ ಭಾರತ ಬೇಕು. ಸ್ವಾತಂತ್ರ್ಯ ನಂತರ ಮಹಾತ್ಮ ಗಾಂಧಿ ಅವರು, ಈಗ ದೇಶ ಸ್ವತಂತ್ರವಾಗಿದ್ದು, ಕಾಂಗ್ರೆಸ್ ಅನ್ನು ವಿಸರ್ಜಿಸಬೇಕು ಎಂದಿದ್ದರು ಎಂದು ಪ್ರಧಾನಿ ಹೇಳಿದರು. ಅಲ್ಲದೆ ಕಾಂಗ್ರೆಸ್ ಇಂದಿರಾ ಗಾಂಧಿ ಭಾರತ-ತುರ್ತು ಪರಿಸ್ಥಿತಿಯ ಭಾರತ, ಬೋಪೋರ್ಸ್ ಮತ್ತು ಕ್ಯಾಪ್ಟರ್ ಹಗರಣ ಬೇಕು ಎಂದು ಬಯಸುತ್ತಿದೆ ಎಂದು ಹರಿಹಾಯ್ದರು.
ಕಾಂಗ್ರೆಸ್ ನಮ್ಮನ್ನು ನೇಮ್ ಚೇಂಜರ್ಗಳು ಎಂದು ಹೇಳುತ್ತಿದೆ. ಆದರೆ ನಾವು ನೇಮ್ ಚೇಂಜರ್ಗಳಲ್ಲ, ಏಮ್ ಚೇಸರ್ಗಳು. ಇದಕ್ಕಾಗಿ ನಮ್ಮ ಸರ್ಕಾರ ದಿನವಿಡೀ ಶ್ರಮಪಡುತ್ತಿದೆ ಎಂದು ಮೋದಿ ತಿರುಗೇಟು ನೀಡಿದರು.
ಕಾಂಗ್ರೆಸ್ ಕಳೆದ ಐದು ದಶಕದ ಆಡಳಿತಾವಧಿಯಲ್ಲಿ ಮಾಡಿರುವ ತಪ್ಪುಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಪ್ರಧಾನಿ ಮೋದಿ, ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಜಾರಿಗೆ ತಂದ ಪ್ರತಿಯೊಂದು ಯೋಜನೆಯ ಬಗ್ಗೆಯೂ ಟೀಕೆ ಮಾಡುವುದು ಸರಿಯಲ್ಲ. ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಹಲವಾರು ಯೋಜನೆಗಳ ಬಗ್ಗೆ ನಾನೇ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದೇನೆ ಎಂದರು.
ಬಿಜೆಪಿ ನವಭಾರತ ನಿರ್ಮಾಣದಲ್ಲಿ ಮುಂದಾಗಿದೆ. ಆದರೆ ಕಾಂಗ್ರೆಸ್ ಬದಲಾವಣೆಯೇ ಬೇಡವಾಗಿದೆ. ಅದಕ್ಕೆ ಎಂದಿಗೂ ಹಗರಣಗಳು, ತುರ್ತು ಪರಿಸ್ಥಿತಗಳೇ ಬೇಕಾಗಿದೆ ಎಂದು ಆರೋಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics