ಒಂದು ಗಂಟೆ ಅವಧಿಯ ಭಾಷಣದಲ್ಲಿ ರಫೆಲ್ ಡೀಲ್ ಬಗ್ಗೆ ಉಲ್ಲೇಖವೇ ಇಲ್ಲ: ಮೋದಿಗೆ ರಾಹುಲ್ ಗಾಂಧಿ
ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಭಾಷಣದ ಬಗ್ಗೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದ್ದು, ಮೋದಿ ಅವರ ಭಾಷಣದಲ್ಲಿ
ನವದೆಹಲಿ: ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಭಾಷಣದ ಬಗ್ಗೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದ್ದು, ಮೋದಿ ಅವರ ಭಾಷಣದಲ್ಲಿ ಎಲ್ಲೂ ರಫೆಲ್ ಡೀಲ್ ಬಗ್ಗೆ ಉಲ್ಲೇಖವೇ ಇರಲಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯ ಕೈಗೊಳ್ಳುವುದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿದ್ದರು, ಈ ವೇಳೆ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದ ಪ್ರಧಾನಿ ಮೋದಿ ಕಾಂಗ್ರೆಸ್ ನಿಂದ ನಾವು ಪ್ರಜಾಪ್ರಭುತ್ವದ ಪಾಠ ಕಲಿಯಬೇಕಿಲ್ಲ, ಭಾರತವು 1947ರಲ್ಲಿ ಸ್ವಾತಂತ್ರ್ಯ ಪಡೆದ ನಂತರವೇ ಉದಯಿಸಿದ್ದು ಎಂದು ಕಾಂಗ್ರೆಸ್ ಭಾವಿಸಿದಂತಿದೆ. ಈ ದೇಶದಲ್ಲಿ ಪ್ರಜಾತಂತ್ರ ಬಂದಿದ್ದು, ನೆಹರೂ ಹಾಗೂ ಕಾಂಗ್ರೆಸ್ ನಿಂದ ಎಂದು ಹೇಳಿಕೊಂಡು ಬಂದಿದ್ದಾರೆ. ನಮ್ಮ ಇತಿಹಾಸದಲ್ಲಿ ಶ್ರೀಮಂತ ಪ್ರಜಾಪ್ರಭುತ್ವದ ಸಂಪ್ರದಾಯಗಳ ಅನೇಕ ಉದಾಹರಣೆಗಳಿವೆ. ಎಂದು ವಾಗ್ದಾಳಿ ನಡೆಸಿದ್ದರು.
ಪ್ರಧಾನಿ ಮೋದಿ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಹುಲ್ ಗಾಂಧಿ, ನರೇಂದ್ರ ಮೋದಿ ಅವರು ತಾವು ಪ್ರಧಾನಿ ಎಂಬುದನ್ನು ಮರೆತಂತಿದೆ. ಪ್ರಧಾನಿ ಪ್ರಶ್ನೆಗಳಿಗೆ ಉತ್ತರಿಸಬೇಕು, ಯಾವಾಗಲೂ ಪ್ರತಿಪಕ್ಷಗಳನ್ನು ನಿಂದಿಸುವುದಲ್ಲ ಎಂದು ಹೇಳಿದ್ದಾರೆ.
ಮೋದಿ ತಮ್ಮ ಭಾಷಣದಲ್ಲಿ ಯುವಕರಿಗೆ ಉದ್ಯೋಗ ರೈತರು ಸೇರಿದಂತೆ ಯಾವುದೇ ವಿಷಯವನ್ನು ಪ್ರಸ್ತಾಪ ಮಾಡಲಿಲ್ಲ. ಪ್ರಧಾನಿಯ ಭಾಷಣ ಕೇವಲ ರಾಜಕೀಯ ಭಾಷಣವಾಗಿತ್ತು ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.