ಶ್ರೀನಗರ: ಸಂಸತ್ ಭವನದ ಮೇಲೆ ದಾಳಿ ಮಡಾದಿದ್ ಅಪರಾಧಕ್ಕಾಗಿ ಮೊಹಮ್ಮದ್ ಅಫ್ಜಲ್ ಗುರುವನ್ನು ಗಲ್ಲಿಗೇರಿಸಿ 5 ವರ್ಷಗಳಾಗಿರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿರುವ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಕಾಶ್ಮೀರದ ಹಲವೆಡೆ ಶುಕ್ರವಾರ ನಿರ್ಬಂಧ ಹೇರಿದೆ.
ಅಫ್ಜಲ್ ಗುರು ಸಾವನ್ನಪ್ಪಿ ಇಂದಿಗೆ ಐದು ವರ್ಷಗಳು ಕಳೆದಿದ್ದು, ಈ ಸಂದರ್ಭದಲ್ಲಿ ಪ್ರತ್ಯೇಕತಾವಾದಿಗಳು ಕಾಶ್ಮೀರ ಬಂದ್'ಗೆ ಕರೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಕಾಶ್ಮೀರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.
ಶ್ರೀನಗರದ ಹಳೇ ನಗರ ಪ್ರದೇಶ, ಉತ್ತರ ಮತ್ತು ದಕ್ಷಿಣ ಕಾಶ್ಮೀರದ ಹಲವು ಪ್ರದೇಶಗಳಲ್ಲಿ ನಿರ್ಬಂಧ ಹೇರಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಹಿರಿಯ ಪ್ರತ್ಯೇಕತವಾದಿ ನಾಯಕರುಗಳಾದ ಸಯ್ಯದ್ ಅಲಿ ಗಿಲಾನಿ ಮತ್ತು ಮಿರ್ವೈಜ್ ಉಮರ್ ಫರಾಖ್ ಅವರನ್ನು ಈಗಾಗಲೇ ಗೃಹ ಬಂಧನದಲ್ಲಿರಿಸಲಾಗಿದ್ದು, ಮುಹಮ್ಮದ್ ಯಾಸಿನ ಮಲಿಕ್ ಅವರನ್ನು ಕೇಂದ್ರೀಯ ಕಾರಾಗೃಹದಲ್ಲಿರಿಸಲಾಗಿದೆ ಎಂದು ತಿಳಿದುಬಂದಿದೆ.
ಹಲವೆಡೆ ನಿರ್ಬಂಧ ಹೇರಿರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಉತ್ತರ ಕಾಶ್ಮೀರದ ಬಾರಾಮುಲ್ಲಾ ಮತ್ತು ಬನ್ನಿಹಾಲ್ ಟೌನ್ ನಲ್ಲಿ ರೈಲು ಸೇವೆಗಳನ್ನು ನಿಷೇಧಿಸಲಾಗಿದೆ.
ಸಂಸತ್ತಿನ ಮೇಲೆ ದಾಳಿ ನಡೆಸಿರುವ ಪ್ರಕರಣದಲ್ಲಿ ಅಫ್ಜಲ್ ಗುರು ಅಪರಾಧಿಯೆಂದು ಸಾಬೀತಾದ ಬಳಿಕ ರಾಜಧಾನಿ ದೆಹಲಿಯ ತಿಹಾರ್ ಜೈಲಿನಲ್ಲಿ 2013ರ ಫೆ.9 ರಂದು ಅಫ್ಜಲ್ ಗುರುನನ್ನು ಗಲ್ಲಿಗೇರಿಸಲಾಗಿತ್ತು.