ಫರಿದಾಬಾದ್: ಬಿಕನೆರ್ ಭೂ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸದೀಯ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರ ಆಪ್ತ ಹಾಗೂ ಕಾಂಗ್ರೆಸ್ ನಾಯಕ ಮಹೇಶ್ ನಗರ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ(ಇಡಿ) ಶುಕ್ರವಾರ ದಾಳಿ ನಡೆಸಿದೆ.
ಹರಿಯಾಣದ ಫರಿದಾಬಾದ್ ನಲ್ಲಿರುವ ನಗರ್ ಮನೆ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದು, ಹಲವು ಮಹತ್ವದ ದಾಖಲೆಳನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಇಡಿ ಮೂಲಗಳ ಪ್ರಕಾರ, ಮಹೇಶ್ ನಗರ ಖಾಸಗಿ ಸಂಸ್ಥೆ ಸ್ಕೈಲೈಟ್ ಹಾಸ್ಪಿಟಾಲಿಟಿಯ ಪ್ರತಿನಿಧಿಯಾಗಿದ್ದು, ರಾಜಸ್ಥಾನದ ಬಿಕನೆರ್ ಜಿಲ್ಲೆಯಲ್ಲಿ ಭೂಮಿ ಖರೀದಿಸಿದ್ದರು. ಸ್ಕೈಲೈಟ್ ಹಾಸ್ಪಿಟಾಲಿಟಿ ಸಂಸ್ಥೆಗೂ ಮತ್ತು ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾಗೂ ನಂಟು ಇದೆ ಎನ್ನಲಾಗಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಡಿಸೆಂಬರ್ 22ರಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ಅಕ್ರಮ ಹಣ ವಹಿವಾಟು ನಡೆಸಿದ ಆರೋಪದ ಮೇಲೆ ಜೈಪ್ರಕಾಶ್ ಬಗರ್ವ ಮತ್ತು ಅಶೋಕ್ ಕುಮಾರ್ ಅವರನ್ನು ಬಂಧಿಸಿದ್ದರು.