ದೇಶ

ಮತ್ತೊಂದು ಹನಿ ಟ್ರ್ಯಾಪ್: ಪಾಕ್ ಪರ ಭಾರತದಲ್ಲಿ ಗೂಢಚಾರಿಕೆ ಮಾಡುತ್ತಿದ್ದ ವಾಯು ಸೇನೆ ಅಧಿಕಾರಿ ಬಂಧನ

Srinivasamurthy VN
ನವದೆಹಲಿ: ಪಾಕಿಸ್ತಾನದ ಗೂಢಚಾರಿಕಾ ಸಂಸ್ಥೆ ಐಎಸ್ ಐ ಮತ್ತೆ ತನ್ನ ದುರ್ಬುದ್ಧಿ ತೋರಿದ್ದು, ಯುವತಿಯರನ್ನು ಮುಂದಿಟ್ಟುಕೊಂಡು ಭಾರತೀಯ ಸೇನಾ ಅಧಿಕಾರಿಗಳ ಸೆಳೆಯುವ ಪ್ರಯತ್ನ ಮಾಡಿದೆ ಎನ್ನಲಾಗಿದೆ.
ವರದಿಯೊಂದರ ಅನ್ವಯ ಪಾಕಿಸ್ತಾನದ ಗೂಢಚಾರಿಕಾ ಸಂಸ್ಥೆ ಐಎಸ್ ಐ ಪರ ಭಾರತದಲ್ಲಿ ಗೂಢಚಾರಿಕೆ ನಡೆಸುತ್ತಿದ್ದ ಆರೋಪದ ಮೇರೆಗೆ ರಾಜಧಾನಿ ದೆಹಲಿಯಲ್ಲಿ ಭಾರತೀಯ ವಾಯು ಸೇನೆಯ ಅಧಿಕಾರಿಯೊಬ್ಬರನ್ನು  ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅಧಿಕಾರಿಗಳು ತಿಳಿಸಿರುವಂತೆ ಬಂಧಿತ ಸೇನಾಧಿಕಾರಿಯನ್ನು 51 ವರ್ಷದ ಗ್ರೂಪ್ ಕ್ಯಾಪ್ಟನ್ ಅರುಣ್ ಮರ್ವಾಹ್ ಎಂದು ತಿಳಿದುಬಂದಿದ್ದು, ಇವರು ಕಳೆದ ಕೆಲವು ದಿನಗಳಿಂದ ಅನಾಮಿಕ  ಮಹಿಳೊಂದಿಗೆ ನಿರಂತರವಾಗಿ ವಾಟ್ಸಪ್ ಸಂದೇಶ ರವಾನಿಸುತ್ತಿದ್ದರಂತೆ.
ಭಾರತೀಯ ಗುಪ್ತಚರ ಸಂಸ್ಥೆಗಳು ಶಂಕಿಸಿರುವಂತೆ ಈ ಅನಾಮಿಕ ಮಹಿಳೆ ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್ ಐನ ಏಜೆಂಟ್ ಎಂದು ಹೇಳಲಾಗಿದೆ. ಹೀಗಾಗಿ ವಾಯುಸೇನೆ ಅಧಿಕಾರಿ ಅರುಣ್ ಮರ್ವಾಹ್ ಹನಿ ಟ್ರ್ಯಾಪ್ ಗೆ  ಬಲಿಯಾಗಿರುವ ಸಾಧ್ಯತೆ ಇದ್ದು, ಇದೇ ಕಾರಣಕ್ಕೆ ಅವರನ್ನು ಅಧಿಕಾರಿಗಳ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ವರದಿಯಲ್ಲಿರುವಂತೆ ಕಳೆದ ಒಂದು ತಿಂಗಳ ಹಿಂದೆಯೇ ಐಎಸ್ ಐ ಮಹಿಳಾ ಏಜೆಂಟ್ ಅರುಣ್ ಮರ್ವಾಹ್ ಅವರನ್ನು ಸಂಪರ್ಕ ಮಾಡಿದ್ದು, ಅಂದಿನಿಂದ ಸತತವಾಗಿ ವಾಟ್ಸಪ್ ಮೂಲಕ ಚಾಟಿಂಗ್ ನಡೆಸುತ್ತಿದ್ದರಂತೆ. ಕೇವಲ  ಮಾಹಿತಿ ವಿನಿಮಯ ಮಾತ್ರವಲ್ಲದೇ ತೀರಾ ವೈಯುಕ್ತಿಕ ಲೈಂಗಿಕ ಸಂದೇಶಗಳನ್ನೂ ಕೂಡ ಇಬ್ಬರು ಪರಸ್ಪರ ವಿನಿಮಿಯ ಮಾಡಿಕೊಂಡಿರುವ  ಸಂಗತಿ ಕೂಡ ಬಯಲಾಗಿದೆ. ಅರುಣ್ ಮರ್ವಾಹ್ ಅವರ ನಂಬಿಕೆ ಗಳಿಸಿದ ಮಹಿಳಾ  ಐಎಸ್ ಐ ಏಜೆಂಟ್ ನಿಧಾನವಾಗಿ ಭಾರತೀಯ ಸೇನೆಯ ಮಾಹಿತಿಗಳನ್ನು ಕಲೆಹಾಕಲು ಆರಂಭಿಸಿದ್ದು, ಪ್ರಮುಖವಾಗಿ ಸೇನೆಯ ಗೌಪ್ಯ ದಾಖಲೆಗಳ ಕುರಿತು ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ.
ಮಹಿಳೆ ಮೋಹಕ್ಕೆ ಒಳಗಾದ ಅರುಣ್ ಮರ್ವಾಹ್ ಸೇನೆಯ ಮಾಹಿತಿ ಗೌಪ್ಯ ಕಾಯ್ದೆಯನ್ನು ಉಲ್ಲಂಘಿಸಿ ಪ್ರಮುಖ ದಾಖಲೆಗಳ ಮಾಹಿತಿ ಸೋರಿಕೆ ಮಾಡಿದ್ದಾರೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಪ್ರಸ್ತುತ ಈ ಬಗ್ಗೆ ಅಧಿಕಾರಿಗಳು  ದೆಹಲಿ ಪೊಲೀಸರಿಗೆ ದೂರು ನೀಡಿದ್ದು, ಅರುಣ್ ಮರ್ವಾಹ್ ಅವರನ್ನು ಬಂಧಿಸಿರುವ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ. ಅಂತೆಯೇ ಮರ್ವಾಹ್ ಅವರನ್ನು ಐದು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
SCROLL FOR NEXT