ನವದೆಹಲಿ: ಶೋಪಿಯಾನ್ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಜರ್ ಆದಿತ್ಯಾ ಕುಮಾರ್ ಅವರಿಗೆ ರಿಲೀಫ್ ನೀಡುವಂತೆ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಫೆ.12 ರಂದು ವಿಚಾರಣೆ ನಡೆಸಲಿದೆ ಎಂದು ತಿಳಿದುಬಂದಿದೆ.
ಶೋಪಿಯಾನ್ ಜಿಲ್ಲೆಯಲ್ಲಿ ಕಲ್ಲುತೂರಾಟಗಾರರ ಮೇಲೆ ಭದ್ರತಾ ಪಡೆಗಳು ನಡೆಸಿದ್ದ ಗುಂಡಿನ ದಾಳಿಯಲ್ಲಿ ಮೂವರು ನಾಗರೀಕರು ಸಾವನ್ನಪ್ಪಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮೇಜರ್ ಆದಿತ್ಯ ಕುಮಾರ್ ಸೇರಿದಂತೆ ಇನ್ನಿತರೆ ಸೇನಾಧಿಕಾರಿಗಳ ವಿರುದ್ದ ಎಫ್ಐಆರ್ ದಾಖಲಿಸಿದ್ದರು.
ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಆದಿತ್ಯ ಕುಮಾರ್ ಅವರ ತಂದೆ, ಪ್ರಕರಣ ಸಂಬಂಧ ಆದಿತ್ಯ ಅವರಿಗೆ ರಿಲೀಫ್ ನೀಡುವಂತೆ ಕೋರಿ ಸುಪ್ರೀಂಕೋರ್ಟ್'ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಕುರಿತ ಅರ್ಜಿಯನ್ನು ವಿಚಾರಣೆ ನಡೆಸಲು ಸಮ್ಮತಿ ನೀಡಿರುವ ಸುಪ್ರೀಂಕೋರ್ಟ್, ಫೆ.12 ರಂದು ಅರ್ಜಿ ವಿಚಾರಣೆ ನಡೆಸುವುದಾಗಿ ತಿಳಿಸಿದೆ.