ನವದೆಹಲಿ: 2014 ರಲ್ಲಿ ಪುಣೆಯಲ್ಲಿ ನಡೆದಿದ್ದ ಶೇಖ್ ಮೊಹ್ಸಿನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಹೈಕೋರ್ಟ್ ನ್ನು ಟೀಕಿಸಿರುವ ಸುಪ್ರೀಂ ಕೋರ್ಟ್ ಕೋರ್ಟ್ ಕೋಮು ಪಕ್ಷಪಾತದ ಅಭಿಪ್ರಾಯ ನೀಡುವಂತಿಲ್ಲ ಎಂದು ಹೇಳಿದೆ.
ನಿರ್ದಿಷ್ಟ ಕೋಮಿನ ಪರವಾಗಿ ಅಥವಾ ವಿರುದ್ಧವಾದ ಅಭಿಪ್ರಾಯಗಳನ್ನು ಕೋರ್ಟ್ ನೀಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ಹತ್ಯೆ ಪ್ರಕರಣದಲ್ಲಿ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದ್ದ ಮುಂಬೈ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.
ನ್ಯಾ.ಎಸ್ಎ ಬೋಬ್ಡೆ ಹಾಗೂ ಎಲ್ ನಾಗೇಶ್ವರ ರಾವ್ ಅವರ ಪೀಠ ಹೈಕೋರ್ಟ್ ಆರೋಪಿಗಳಿಗೆ ನೀಡಿದ್ದ ಜಾಮೀನು ಆದೇಶವನ್ನು ರದ್ದುಗೊಳಿಸಿದ್ದು, ಹತ್ಯೆಯಾಗಿರುವ ವ್ಯಕ್ತಿಯ ತಪ್ಪೆಂದರೆ ಆತ ಅನ್ಯ ಧರ್ಮಕ್ಕೆ ಸೇರಿದವನಾಗಿದ್ದು ಎಂದು ಹೈಕೋರ್ಟ್ ಏಕೆ ಹೇಳಿತ್ತು ಎಂಬುದು ಅರ್ಥವಾಗುತ್ತಿಲ್ಲ ಎಂದು ಹೇಳಿದೆ.
ಹೈಕೋರ್ಟ್ ನ ಹೇಳಿಕೆಯನ್ನು ತಿರಸ್ಕರಿಸಿರುವ ಸುಪ್ರೀಂ ಕೋರ್ಟ್ ಬಹುಶಃ ಆ ಹತ್ಯೆ ಪ್ರಕರಣದಲ್ಲಿ ವ್ಯಕ್ತಿಯನ್ನು ಕೊಲೆ ಮಾಡುವುದಕ್ಕೆ ವೈಯಕ್ತಿಕ ವೈರತ್ವ ಇರಲಿಲ್ಲ ಎಂಬುದನ್ನು ಹೇಳುವುದಕ್ಕಾಗಿ ಹೈಕೋರ್ಟ್ ನ್ಯಾಯಾಧೀಶರು ಆ ರೀತಿಯ ಹೇಳಿಕೆ ನೀಡಿದ್ದರು. ನಿರ್ದಿಷ್ಟ ಸಮುದಾಯಕ್ಕೆ ನೋವುಂಟು ಮಾಡುವ ಉದ್ದೇಶದಿಂದ ಕೋರ್ಟ್ ಹಾಗೆ ಹೇಳಿರಲು ಸಾಧ್ಯವಿಲ್ಲ, ಆದರೂ ಕೋರ್ಟ್ ಗಳು ಕೋಮು ಪಕ್ಷಪಾತದ ಅಭಿಪ್ರಾಯ ನೀಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.