ಬೆಂಗಳೂರು: ವ್ಯಕ್ತಿಯೊಬ್ಬರ ಮೇಲೆ ಶಾಸಕ ಎನ್ ಎ ಹ್ಯಾರಿಸ್ ಪುತ್ರ ಮೊಹಮದ್ ನಲಪಾಡ್ ಹ್ಯಾರಿಸ್ ದಾಳಿ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು 5 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ ಎನ್ನಲಾಗಿದೆ.
ಮಾಧ್ಯಮ ವರದಿಗಳ ಅನ್ವಯ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸರು ಒಟ್ಟು ಐದು ಮಂದಿ ಆರೋಪಿಗಳನ್ನು ವಶಕೆ ಪಡೆದಿದ್ದು, ಬಂಧಿತರನ್ನು ಬಾಲಕೃಷ್ಣ, ಮಂಜುನಾಥ್, ಅಭಿಷೇಕ್, ಅರುಣ್ ಎಂದು ಗುರುತಿಸಲಾಗಿದೆ. ಅಂತೆಯೇ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ನಾಪತ್ತೆಯಾಗಿದ್ದು, ಅವರ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದಾರೆ.
ಏತನ್ಮಧ್ಯೆ ಪ್ರಕರಣದ ಆರೋಪಿಗಳನ್ನು ಕೂಡಲೇ ಬಂಧಿಸಿರುವಂತೆ ಬಿಜೆಪಿ ಮತ್ತು ಆಪ್ ಕಾರ್ಯಕರ್ತರು ಆಗ್ರಹಿಸುತ್ತಿದ್ದು, ಹಲ್ಲೆಗೊಳಗಾದ ವಿದ್ವತ್ ದಾಖಲಾಗಿರುವ ಮಲ್ಯಾ ಆಸ್ಪತ್ರೆ, ಪ್ರಕರಣ ದಾಖಲಾಗಿರುವ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಮತ್ತು ಶಾಸಕ ಎನ್ ಎ ಹ್ಯಾರಿಸ್ ಅವರ ನಿವಾಸದ ಮುಂದೆ ಕಾರ್ಯಕರ್ತರು ಪ್ರತಿಭಟನೆ ಮುಂದವರೆಸಿದ್ದಾರೆ. ಘಟನೆ ನಡೆದು 20ಕ್ಕೂ ಅಧಿಕ ಗಂಟೆಯಾಗಿದ್ದರೂ ಪ್ರಮುಖ ಆರೋಪಿಯ ಸುಳಿವು ಸಿಕ್ಕಿಲ್ಲವೇಕೆ ಎಂದು ಬಿಜೆಪಿ, ಎಎಪಿ ಆಗ್ರಹಿಸಿದೆ.
ನಿನ್ನೆ ಯುಬಿ ಸಿಟಿಯಲ್ಲಿ ಊಟಕ್ಕೆ ತೆರಳಿದ್ದ ನಲಪಾಡ್ ಮತ್ತು ಆತನ ಸ್ನೇಹಿತರು ಕ್ಷುಲ್ಲಕ ವಿಚಾರಕ್ಕೆ ವಿದ್ವತ್ ಎಂಬಾತನೊಂದಿಗೆ ಜಗಳ ಮಾಡಿಕೊಂಡಿದ್ದು, ಬಳಿಕ ವಿದ್ವತ್ ಮೇಲೆ ಮನಸೋ ಇಚ್ಛೆ ಥಳಿಸಿದ್ದಾರೆ. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ವಿದ್ಪತ್ ರನ್ನು ಸಮೀಪದ ಮಲ್ಯಾ ಆಸ್ಪತ್ರೆಗೆ ದಾಖಲು ಮಾಡಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.