ನವದೆಹಲಿ: ಡೈಮಂಡ್ ಕಿಂಗ್ ಉದ್ಯಮಿ ನೀರವ್ ಮೋದಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕಾರ್ಯಕ್ರಮಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗಂಟೆಗಟ್ಟಲೆ ಮಾತನಾಡುತ್ತಾರೆ. ಆದರೆ ಪಿಎನ್ಬಿ ವಂಚನೆ ಪ್ರಕರಣದ ಕುರಿತಂತೆ ಎರಡು ನಿಮಿಷ ಮಾತನಾಡಲು ಪ್ರಧಾನಿಗೆ ಸಮಯವಿಲ್ಲ. ಇತ್ತ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಕಾಣೆಯಾಗಿದ್ದಾರೆ ಎಂದು ಹೇಳಿದ್ದಾರೆ.
ನೋಟು ಅಪನಗದಿಕರಣದ ವೇಳೆ ಬಿಲಿಯನೇರ್ ಆಭರಣ ವಿನ್ಯಾಸಕ ನೀರವ್ ಮೋದಿ ದೇಶ ಲೂಟಿ ಮಾಡಲು ಮೋದಿ ಸರ್ಕಾರ ಅವಕಾಶ ನೀಡಿದೆ ಎಂದು ಶನಿವಾರ ರಾಹುಲ್ ಗಾಂಧಿ ಆರೋಪಿಸಿದ್ದರು.
ಉನ್ನತ ಮಟ್ಟದ, ಪ್ರಭಾವಿಗಳ ರಕ್ಷಣೆ ಇಲ್ಲದೆ 22 ಸಾವಿರ ಕೋಟಿ ರುಪಾಯಿ ವಂಚನೆ ಮಾಡಲು ಸಾಧ್ಯವಿಲ್ಲ. ಇದರಲ್ಲಿ ಕೇಂದ್ರ ಸರ್ಕಾರದ ಪ್ರಭಾವಿಗಳ ಪಾತ್ರ ಇದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಬಗ್ಗೆ ಉತ್ತರ ನೀಡಬೇಕು ಎಂದು ರಾಹುಲ್ ಆಗ್ರಹಿಸಿದ್ದರು. ಪ್ರತಿ ಬಾರಿಯೂ ಬಿಜೆಪಿ ಜವಾಬ್ದಾರಿ ತೆಗೆದುಕೊಳ್ಳಲು ನಿರಾಕರಿಸುತ್ತದೆ. ಆದರೆ ಈ ಬಾರಿ ಪ್ರಧಾನಿ ಮೋದಿ ದೇಶದ ಜನತೆಗೆ ಉತ್ತರ ನೀಡಲೆಬೇಕು ಎಂದಿದ್ದರು.
ನೀರವ್ ಮೋದಿ 22 ಸಾವಿರ ಕೋಟಿ ರುಪಾಯಿ ತೆಗೆದುಕೊಂಡು ವಿದೇಶಕ್ಕೆ ಪರಾರಿಯಾಗಿದ್ದರೆ, ಪ್ರಧಾನಿ ಮೋದಿ ಅವರು ಮಕ್ಕಳಿಗೆ ಪರೀಕ್ಷೆ ಬರೆಯುವುದು ಹೇಗೆ ಎಂದು ಹೇಳುತ್ತಿದ್ದಾರೆ. ಆದರೆ ನೀರವ್ ಮೋದಿ ತೆಗೆದುಕೊಂಡು ಹೋದ ಹಣಕ್ಕೆ ಯಾರು ಜವಾಬ್ದಾರರು? ಎಂದು ರಾಹುಲ್ ಪ್ರಶ್ನಿಸಿದ್ದರು.