ಶ್ರೀನಗರ: ಕಣಿವೆ ರಾಜ್ಯ ಕಾಶ್ಮೀರದಲ್ಲಿ ಉಗ್ರರ ಹಾವಳಿ ಹೆಚ್ಚಾಗಿರುವಂತೆಯೇ ಮಂಗಳವಾರ ಕುಪ್ವಾರದಲ್ಲಿ ಉಗ್ರರ ಅಡಗುದಾಣಗಳನ್ನು ಧ್ವಂಸ ಮಾಡಲಾಗಿದೆ.
ಕುಪ್ವಾರದ ಲಷ್ತಿಯಾಲ್ ಗ್ರಾಮದ ಅರಣ್ಯ ಪ್ರದೇಶದಲ್ಲಿದ್ದ ಉಗ್ರರ ಅಡಗುದಾಣವನ್ನು ಸೈನಿಕರು ಧ್ವಂಸ ಮಾಡಿದ್ದು, ಈ ವೇಳೆ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಈ ವೇಳೆ ಬರೊಬ್ಬರಿ 2 ಕೆಜಿಯಷ್ಟು ಸುಧಾರಿತ ಸ್ಫೋಟಕ, ಮೂರು ಯುಬಿಜಿಎಲ್ ಶೆಲ್ ಗಳು, 15 ಸುತ್ತು ಜೀವಂತ ಗುಂಡುಗಳಿದ್ದ ಪಿಸ್ತೂಲ್, 335 ಸುತ್ತು ಜೀವಂತ ಗುಂಡುಗಳ ಸಹಿತ ಎಕೆ 47 ಗನ್, 7 ಡಿಟೋನೇಟರ್ ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಕುಪ್ವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಅವಿತಿರುವ ಉಗ್ರರಿಗಾಗಿ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ.
ಸಿಆರ್ ಪಿಎಫ್ ಅಧಿಕಾರಿಗಳಿಗೆ ದೊರೆತ ಖಚಿತ ಮಾಹಿತಿ ಮೇರೆಗೆ 41 ರಾಷ್ಟ್ರೀಯ ರೈಫಲ್ಸ್ ನೆರವಿನೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.