ಕೋಲ್ಕತ್ತಾ: ಸಕಾಲದಲ್ಲಿ ರಕ್ತ ಸಿಗದೆ ಸತ್ತ ತಾಯಿಯ ನೆನಪಿಗಾಗಿ ಇಲ್ಲಿನ ವ್ಯಕ್ತಿಯೊಬ್ಬ ಒಂದಲ್ಲಾ, ಎರಡಲ್ಲಾ ಬರೋಬ್ಬರಿ 152 ಬಾರಿ ರಕ್ತದಾನ ಮಾಡುವ ಮೂಲಕ ಮಹದಾನಿ ಎನಿಸಿಕೊಂಡಿದ್ದಾರೆ.
ಜನಾರ್ಧನ್ ಘೋಷ್ 8 ವರ್ಷದ ಬಾಲಕನಾಗಿದ್ದಾಗ ಬುರ್ಧ್ವಾನ್ ವೈದ್ಯಕೀಯ ಕಾಲೇಜಿನಲ್ಲಿ ರಕ್ತ ಸಿಗದೆ ಅವರ ತಾಯಿ ಸಾವನ್ನಪ್ಪುತ್ತಾರೆ. ಇಂತಹ ಘಟನೆ ಎಲ್ಲೂ ಮರುಕಳಿಸದಂತೆ ತನ್ನ ತಾಯಿಗೆ ನೀಡಿದ ಪ್ರಮಾಣದಂತೆ ಈಗಲೂ ಅವರು ರಕ್ತದಾನ ಮಾಡುತ್ತಾ ಬಂದಿದ್ದು, ಸಾಮಾನ್ಯ ಜನರಲ್ಲಿ ಡೋನರ್ ದಾ' ಎಂದೇ ಜನಾರ್ಧನ್ ಘೋಷ್ ಪ್ರಸಿದ್ದಿಯಾಗಿದ್ದಾರೆ.
94 ಕೆ. ಜಿ. ತೂಕವಿರುವ ಕಳೆದ 46 ವರ್ಷಗಳಿಂದಲೂ ರಕ್ತದಾನ ಮಾಡುತ್ತಾ ಬಂದಿದ್ದಾರೆ. ರಕ್ತದಾನದಿಂದ ಉತ್ತಮ ಆರೋಗ್ಯ ಕಾಪಾಡಿರುವ ಈತನಿಗೆ 64 ವರ್ಷವಾಗಿದ್ದರೂ ಯಾವುದೇ ಖಾಯಿಲೆ ಇಲ್ಲದೆ ಆರೋಗ್ಯವಂತಾಗಿ ಬದುಕು ಸಾಗಿಸುತ್ತಿದ್ದಾರೆ.
ಇವರ ಈ ಕಾರ್ಯದಿಂದ ಆಕರ್ಷಿತರಾಗಿರುವ ಜಿಲ್ಲಾಡಳಿತ, ಈತನ ನಂಬರ್ ಎಲ್ಲಾ ಕಚೇರಿಗಳಲ್ಲಿ ಇರುವಂತೆ ಮಾಡಿದೆ. ಅಲ್ಲದೇ ಕಳೆದ 12 ವರ್ಷಗಳಿಂದಲೂ ಪ್ರತಿವರ್ಷದ ಗಣರಾಜ್ಯೋತ್ಸವ ಸಂದರ್ಭದಲ್ಲಿ ಈತನನ್ನು ಸನ್ಮಾನಿಸುವ ಪರಿಪಾಠ ಬೆಳೆಸಿಕೊಂಡು ಬಂದಿದೆ.
ಪಶ್ಚಿಮ ಬಂಗಾಳ ಮಾತ್ರವಲ್ಲದೇ ದೆಹಲಿಯಲ್ಲೂ ಇವರು ರಕ್ತದಾನ ಮಾಡಿದ್ದಾರೆ. ಆದಾಗ್ಯೂ, 1987ರಲ್ಲಿ ಕೇಂದ್ರ ರಕ್ತನಿಧಿಯಲ್ಲಿ ಅಪಾರ ಪ್ರಮಾಣದ ರಕ್ತ ವ್ಯರ್ಥಗೊಂಡಿದ್ದರಿಂದ ಅಸಮಾಧಾನಗೊಂಡಿದ್ದ ಜನಾರ್ಧನ್ ಘೋಷ್ ಮೂರು ವರ್ಷ ರಕ್ತದಾನ ಮಾಡುವುದನ್ನ ನಿಲ್ಲಿಸಿದ್ದರು. ಆದರೆ ,1990ರಿಂದ ಮತ್ತೆ ರಕ್ತದಾನ ಮುಂದುವರೆಸಿದ್ದು, ಮೊನ್ನೆಯಷ್ಟೇ ನಿಲ್ಲಿಸಿದ್ದಾರೆ. ಜೂನ್. 20ರ ನಂತರ ಮತ್ತೆ ರಕ್ತದಾನ ಮಾಡುವುದಾಗಿ ಅವರು ಹೇಳಿದ್ದಾರೆ,
ತಮ್ಮ ತಾಯಿಗೆ ಮಾಡಿದ ವಚನದಂತೆ ನಡೆದುಕೊಳ್ಳುತ್ತಿರುವುದಾಗಿ ಅವರು ಸಂತಸ ವ್ಯಕ್ತಪಡಿಸುತ್ತಾರೆ. ರಕ್ತದಾನದಿಂದ ರಕ್ತ ಮಾತ್ರ ಸಂರಕ್ಷಿಸಲ್ಪಡುವುದಿಲ್ಲ, ಉತ್ತಮ ಆರೋಗ್ಯ ಕಾಪಾಡಿ ಹೆಚ್ಚು ವರ್ಷ ಬದುಕುವಂತೆ ಮಾಡುತ್ತದೆ ಎಂದು ಡೋನರ್ ದಾ ಸಲಹೆ ನೀಡುತ್ತಾರೆ.