ದೇಶ

ಬೇರೆ ಕೆಲಸ ಹುಡುಕಿಕೊಳ್ಳಿ, ನಿಮಗೆ ಸಂಬಳ ಕೊಡಲು ಆಗುವುದಿಲ್ಲ: ಸಿಬ್ಬಂದಿಗಳಿಗೆ ನೀರವ್ ಮೋದಿ ಪತ್ರ

Nagaraja AB

ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ಪ್ರಮುಖ ಆರೋಪಿ ನೀರವ್ ಮೋದಿ ಭಾರತದಲ್ಲಿರುವ ತನ್ನ ಕಂಪನಿಗಳ ಸಿಬ್ಬಂದಿಗಳಿಗೆ ಇ- ಮೇಲ್ ಮೂಲಕ ಪತ್ರ ಬರೆದಿದ್ದು, ಬೇರೆ ಕೆಲಸ ಹುಡುಕಿಕೊಳ್ಳಿ, ಸಂಬಳ ಕೊಡಲು ಆಗುವುದಿಲ್ಲ ಎಂದು ಹೇಳಿದ್ದಾರೆ.

ತನಿಖಾ ಸಂಸ್ಥೆಗಳು ತನ್ನೆಲ್ಲಾ ಕಂಪನಿಗಳನ್ನು ವಶಕ್ಕೆ ಪಡೆದಿದ್ದು, ಬ್ಯಾಂಕ್ ಖಾತೆಗಳನ್ನು ಆದಾಯ ತೆರಿಗೆ ಇಲಾಖೆ ಮುಟ್ಟುಗೋಲು ಹಾಕಿಕೊಂಡಿದೆ. ಹಾಗಾಗೀ ನಿಮ್ಮ ಭವಿಷ್ಯ ಆತಂತ್ರವಾಗದಂತೆ ಬೇರೊಂದು ಉದ್ಯೋಗ ಹುಡುಕಿಕೊಳ್ಳುವಂತೆ ಇ-ಮೇಲ್ ನಲ್ಲಿ ತಿಳಿಸಿದ್ದಾರೆ ಎಂಬುದನ್ನು ಮೋದಿ ಪರ ವಕೀಲರು ದೃಢಪಡಿಸಿದ್ದಾರೆ.

ಅಲ್ಲದೇ ಆತನ ಪಾಸ್ ಪೋರ್ಸ್ ಅಮಾನತುಗೊಳಿಸದಂತೆ ಜಾರಿ ನಿರ್ದೇಶನಾಲಯ, ಸಿಬಿಐ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಮೋದಿ ಪತ್ರ ಬರೆದಿದ್ದಾನೆ.

 ಪಂಜಾಬ್ ನ್ಯಾಷನಲ್ ಬ್ಯಾಂಕಿನ 11.400 ಕೋಟಿ ರೂ. ಹಗರಣಕ್ಕೆ ಸಂಬಂಧಿಸಿದಂತೆ ನೀರವ್ ಮೋದಿ ಹಾಗೂ ಆತನ ಸಂಬಂಧಿ ಮೆಹೂಲ್ ಚೋಕ್ಸಿ ವಿರುದ್ಧ ಎರಡು ಎಫ್ ಐಆರ್ ಗಳನ್ನು ಸಿಬಿಐ ದಾಖಲಿಸಿದೆ.

ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಆತನಿಗೆ ಸೇರಿದ ಕಂಪನಿ ಹಾಗೂ ಮಳಿಗೆಗಳಿಂದ ಸುಮಾರು 5,700 ಕೋಟಿ ರೂ. ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡಿದೆ.

ಈ ಬಗ್ಗೆ ತನ್ನ ಉದ್ಯೋಗಿಗಳಿಗೆ ವಿವರಣೆ ನೀಡಿರುವ ನೀರವ್ ಮೋದಿ, ಜನವರಿ 1ರಿಂದ ವಿದೇಶದಲ್ಲಿ ತಲೆಮರೆಸಿಕೊಂಡಿದ್ದು, ತನ್ನೆಲ್ಲಾ ಕಂಪನಿ ಹಾಗೂ ಬ್ಯಾಂಕ್ ಖಾತೆಗಳನ್ನು ತನಿಖಾ ಸಂಸ್ಥೆಗಳು ವಶಪಡಿಸಿಕೊಂಡಿರುವುದರಿಂದ ಬೇರೆ ಉದ್ಯೋಗ ನೋಡಿಕೊಳ್ಳುವಂತೆ ಪತ್ರದಲ್ಲಿ ತಿಳಿಸಿದ್ದಾನೆ.

ಫೆಬ್ರವರಿ 15 ರಂದು ನೀರವ್ ಮೋದಿ ಮೇಲಿನ ಆರೋಪ ಕೇಳಿಬಂದ   ನಂತರ ಆತ ಪತ್ರ ಬರೆದಿದ್ದಾನೆ.ಪಂಜಾಬ್ ನ್ಯಾಷನಲ್ ಬ್ಯಾಂಕಿಗೂ ಪತ್ರ ಬರೆದಿದ್ದು, ತಾನೂ ಬ್ಯಾಂಕಿಗೆ ಪಾವತಿಸಬೇಕಾದದ್ದು 11,400ಕೋಟಿ ರೂ. ಗಿಂತಲೂ ಕಡಿಮೆ ಇದೆ ಎಂದು ಹೇಳಿದ್ದಾನೆ. ಈ ಬಗ್ಗೆ ಬ್ಯಾಂಕ್ ಪ್ರತಿಕ್ರಿಯೆ ನೀಡಬೇಕಾಗಿದೆ.

SCROLL FOR NEXT