ಕೊಹಿಮಾ: ನಾಗಾಲ್ಯಾಂಡ್ ವಿಧಾನಸಭೆಗೆ ಮಂಗಳವಾರ ಬೆಳಗ್ಗೆಯಿಂದ ಮತದಾನ ನಡೆಯುತ್ತಿದ್ದು, ಮಧ್ಯಾಹ್ನ 1 ಗಂಟೆಯವರೆಗೆ ಶೇ.56ರಷ್ಟು ಮತದಾನವಾಗಿದೆ.
ಇಂದು ಬೆಳಗ್ಗೆ 7 ಗಂಟೆಯಿಂದ ಮತದನಾ ಆರಂಭವಾಗಿದ್ದು, ಸಂಜೆ 4 ಗಂಟೆಯವರೆಗೆ ನಡೆಯಲಿದೆ. ನಾಗಾಲ್ಯಾಂಡ್ ನ 60 ವಿಧಾನಸಭಾ ಕ್ಷೇತ್ರಗಳ ಪೈಕಿ 59 ಸ್ಥಾನಗಳಿಗೆ ಇಂದು ಮತದಾನ ನಡೆಯುತ್ತಿದೆ. ನಾಗಾಲ್ಯಾಂಡ್‌ನಲ್ಲಿ ಎನ್‌ಡಿಪಿಪಿ ಮುಖ್ಯಸ್ಥ ನೀಫಿಯು ರಿಯೋ ಅವರು 2ನೇ ಉತ್ತರ ಅಂಗಾಮಿ ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಯಾಗಿದ್ದರು.
ಬೆಳಗ್ಗೆ 9 ಗಂಟೆಯವರೆಗೆ ಶೇ.17ರಷ್ಟು ಮತದಾನವಾಗಿದ್ದು, ಆದರೆ 11 ಗಂಟೆಯ ವೇಳೆ ಮತದಾನ ಪ್ರಮಾಣ ಶೇ. 39ಕ್ಕೆ ಏರಿಕೆಯಾಗಿತ್ತು.
ಈ ಮಧ್ಯೆ ಮೋನ್ ಜಿಲ್ಲೆಯ ತಿಜಿತ್ ಮತಗಟ್ಟೆ ಮೇಲೆ ದುಷ್ಕರ್ಮಿಗಳು ಬಾಂಬ್ ಎಸೆದಿದ್ದು, ಘಟನೆಯಲ್ಲಿ ಓರ್ವ ವ್ಯಕ್ತಿ ಗಾಯಗೊಂಡಿದ್ದಾರೆ. ಮತ್ತೊಂದು ಘಟನೆಯಲ್ಲಿ ಝುನ್ಹೆಬೊಟ್ ಜಿಲ್ಲೆಯ ಎನ್ ಪಿಎಫ್ ಮತ್ತು ಎನ್ ಡಿಪಿಪಿ ನಡುವೆ ನಡೆದ ಘರ್ಷಣೆಯಲ್ಲಿ ಓರ್ವ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಈ ಎರಡು ಪ್ರತ್ಯೇಕ ಘಟನೆಗಳನ್ನು ಹೊರತುಪಡಿಸಿ ಮತದಾನ ಬಹುತೇಕ ಶಾಂತಿಯುತವಾಗಿದೆ.
ಮೇಘಾಲಯ ಮತ್ತು ನಾಗಾಲ್ಯಾಂಡ್ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರು ವಿನಂತಿಸಿ ಟ್ವೀಟ್ ಮಾಡಿದ್ದಾರೆ.