ದೇಶ

6 ವಾರದೊಳಗೆ ಕಾವೇರಿ ನಿರ್ವಹಣಾ ಮಂಡಳಿ ರಚನೆ ಕಷ್ಟ: ಸುಪ್ರೀಂಗೆ ಕೇಂದ್ರದ ಹೇಳಿಕೆ

Srinivasamurthy VN
ನವದೆಹಲಿ: 6 ವಾರಗಳೊಳಗೆ ಕಾವೇರಿ ನಿರ್ವಹಣಾ ಮಂಡಳಿ ರಚಿಸಬೇಕು ಎಂಬ ಸುಪ್ರೀಂಕೋರ್ಟ್ ಆದೇಶಕ್ಕೆ ಉತ್ತರ ನೀಡಿರುವ ಕೇಂದ್ರ ಸರ್ಕಾರ ಕಾವೇರಿ ನಿರ್ವಹಣಾ ಮಂಡಳಿ ರಚನೆ ಕಷ್ಟ ಎಂದು ಹೇಳಿದೆ.
ಈ ಬಗ್ಗೆ ಇಂದು ಸುಪ್ರೀಂ ಕೋರ್ಟ್ ಗೆ ಹೇಳಿಕೆ ನೀಡಿರುವ ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವರು, ಕಾವೇರಿ ವಿವಾದ ಸಂಬಂಧ ಈ ಹಿಂದೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಕೇಂದ್ರ ಸರ್ಕಾರ ಗೌರವಿಸುತ್ತದೆ ಎಂದು ಹೇಳಿದ್ದಾರೆ.
ಅಂತೆಯೇ ಕಾವೇರಿ ನಿರ್ವಹಣಾ ಮಂಡಳಿ ರಚನೆ ಅಷ್ಟು ಸುಲಭದ ಕೆಲಸವಲ್ಲ. ಕರ್ನಾಟಕ, ತಮಿಳುನಾಡು ಕೇಂದ್ರದ ಎರಡು ಕಣ್ಣುಗಳಿದ್ದಂತೆ. ಇದನ್ನು ಗಮನದಲ್ಲಿಟ್ಟುಕೊಂಡು ನಿರ್ವಹಣಾ ಮಂಡಳಿ ರಚನೆ ಮಾಡಬೇಕಾಗುತ್ತದೆ. ಹೀಗಾಗಿ ನಿರ್ವಹಣಾ ಮಂಡಳಿ ರಚನೆಗೆ ಕಾಲಾವಕಾಶ ಬೇಕು ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಹೇಳಿದೆ ಎಂದು ತಿಳಿದುಬಂದಿದೆ.
ಇನ್ನು ಇತ್ತೀಚೆಗೆ ಕಾವೇರಿ ನದಿ ನೀರು ಹಂಚಿಕೆ ವಿವಾದ ಸಂಬಂಧ ತನ್ನ ಅಂತಿಮ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, ಕರ್ನಾಟಕಕ್ಕೆ 14.75 ಟಿಎಂಸಿ ಹೆಚ್ಚುವರಿ ನೀರನ್ನು ನೀಡಿತ್ತು. ಅಂತೆಯೇ ಬೆಂಗಳೂರಿಗಾಗಿ 4.5 ಟಿಎಂಸಿ ನೀರನ್ನು ಮೀಸಲಿಟ್ಟು ತಮಿಳುನಾಡಿಗೆ 177.25 ಟಿಎಂಸಿ ನೀರು ಬಿಡುವಂತೆಯೂ ಮತ್ತು ಕೇರಳ ಮತ್ತು ಪಾಂಡಿಚೇರಿಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ನೀಡಿತ್ತು. ಅಲ್ಲದೆ ಇನ್ನು 6 ವಾರಗಳೊಳಗೆ ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದ್ದಲ್ಲದೆ, ಮತ್ತೆ ಕಾಲಾವಕಾಶ ಕೇಳದಂತೆ ಸೂಚನೆ ನೀಡಿತ್ತು.
ಇನ್ನು ಸುಪ್ರೀಂ ಕೋರ್ಟ್ ತೀರ್ಪನ್ನು ಕೇರಳ, ಪುದುಚೇರಿ ರಾಜ್ಯಗಳು ಸ್ವಾಗತಿಸಿದ್ದರೆ, ಕರ್ನಾಟಕ ತಾನು ಕೇಳಿದ್ದಷ್ಟು ಸಿಕ್ಕಿಲ್ಲವಾದೂ ಸಿಕ್ಕಿರುವುದಕ್ಕೇ ಸಂತಸ ಪಟ್ಟಿತ್ತು. ಆದರೆ ತಮಿಳುನಾಡು ಮಾತ್ರ ಸುಪ್ರೀಂ ಕೋರ್ಟ್ ತೀರ್ಪಿಗೆ ಮರು ಪರಿಶೀಲನಾ ಅರ್ಜಿ ಸಲ್ಲಿಕೆ ಮಾಡುವುದಾಗಿ ಹೇಳಿತ್ತು.
SCROLL FOR NEXT