ಶ್ರೀನಗರ: ಆರು ಮಂದಿ ಹುತಾತ್ಮ ಯೋಧರ ಸಾವಿಗೆ ಪ್ರತೀಕಾರವಾಗಿ ಭಾರತೀಯ ಯೋಧರು ಗಡಿಯಲ್ಲಿ ಪಾಕಿಸ್ತಾನದ ಮೂರು ಪೋಸ್ಟ್ ಗಳನ್ನು ಧ್ವಂಸ ಮಾಡಿದ್ದು ಇದರಲ್ಲಿ ಕನಿಷ್ಠ 10 ಮಂದಿ ಪಾಕ್ ಸೈನಿಕರು ಹತ್ಯೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಇತ್ತೀಚೆಗಷ್ಟೇ ಕದನ ವಿರಾಮ ಉಲ್ಲಂಘಿಸಿದ್ದ ಪಾಕಿಸ್ತಾನ ಗಡಿಯಲ್ಲಿ ಗಸ್ತು ತಿರುಗುತ್ತಿದ್ದ ಭಾರತೀಯ ಯೋಧರ ಮೇಲೆ ಗುಂಡಿನ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಸೇನಾ ಕಮಾಂಡೋ ಸೇರಿ ಐವರು ಯೋಧರು ಹುತಾತ್ಮರಾಗಿದ್ದರು. ಅಲ್ಲದೆ ನಿನ್ನೆ ಸಂಜೆ ಸಹ ಪಾಕ್ ಸೈನಿಕರು ಗಡಿಯಲ್ಲಿ ಗುಂಡಿನ ದಾಳಿ ನಡೆಸಿದ್ದರು. ಇದರಲ್ಲಿ ಬಿಎಸ್ಎಫ್ ಯೋಧರೊಬ್ಬರು ಹುತಾತ್ಮರಾಗಿದ್ದರು.
ಇದಾದ ಕೆಲ ಗಂಟೆಗಳಲ್ಲಿಯೇ ಭಾರತೀಯ ಸೇನೆ ಪಾಕಿಸ್ತಾನ ಮೇಲೆ ಪ್ರತೀಕಾರ ತೀರಿಸಿಕೊಂಡಿದೆ. ಗಡಿಯಲ್ಲಿ ಮೂರು ಪಾಕ್ ಪೋಸ್ಟ್ ಗಳನ್ನು ಭಾರತೀಯ ಸೇನೆ ನಾಶ ಮಾಡಿದ್ದು ಇದರಲ್ಲಿ ಪಾಕಿಸ್ತಾನಕ್ಕೆ ಸೇರಿದ ಸೌರಫಲಕ ಹಾಗೂ ಶಸ್ತ್ರಾಸ್ತ್ರಗಳು ಹಾನಿಗೀಡಾಗಿವೆ ಎಂದು ಬಿಎಸ್ಎಫ್ ಐಜಿಯೊಬ್ಬರು ಮಾಹಿತಿ ನೀಡಿದ್ದಾರೆ.
ಭಾರತ ನಡೆಸಿದ ಪ್ರತೀಕಾರದ ದಾಳಿಯಲ್ಲಿ ಇದರಲ್ಲಿ ಸುಮಾರು 10 ಪಾಕ್ ಸೈನಿಕರು ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ.