ಆರ್'ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್
ರಾಂಚಿ; ವಯಸ್ಸು ಮತ್ತು ಅನಾರೋಗ್ಯವನ್ನು ಪರಿಗಣಿಸಿ ಕನಿಷ್ಟ ಶಿಕ್ಷೆಯನ್ನು ವಿಧಿಸಿ ಎಂದು ಬಿಹಾರ ರಾಜ್ಯ ಮಾಜಿ ಮುಖ್ಯಮಂತ್ರಿ ಹಾಗೂ ಆರ್'ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರು ನ್ಯಾಯಾಲಯ ಬಳಿ ಶುಕ್ರವಾರ ಮನವಿ ಮಾಡಿಕೊಂಡಿದ್ದಾರೆ.
ರಾಂಚಿಯ ವಿಶೇಷ ಸಿಬಿಐ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿರುವ ಲಾಲೂ ಪ್ರಸಾದ್ ಯಾದವ್ ಅವರು, ಆರೋಗ್ಯ ಹಾಗೂ ವಯಸ್ಸನ್ನು ಪರಿಗಣಿಸಿ ಕನಿಷ್ಟ ಶಿಕ್ಷೆ ವಿಧಿಸುವಂತೆ ಮನವಿ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ.
ಹಗರಣದಲ್ಲಿ ನೇರವಾಗಿ ನನ್ನ ಪಾತ್ರವಿಲ್ಲ. ಹೀಗಾಗಿ ನನ್ನ ವಯಸ್ಸು ಹಾಗೂ ಅನಾರೋಗ್ಯವನ್ನು ಪರಿಗಣಿಸಿ ಕನಿಷ್ಟ ಶಿಕ್ಷೆ ವಿಧಿಸುವಂತೆ ಅರ್ಜಿಯಲ್ಲಿ ಲಾಲೂ ತಿಳಿಸಿದ್ದಾರೆ.
ಈ ನಡುವೆ ಪ್ರಕರಣ ಸಂಬಂಧ ಹೇಳಿಕೆ ನೀಡಿರುವ ಬಿಹಾರ ಪಕ್ಷದ ಮುಖ್ಯಸ್ಥ ರಾಮಚಂದ್ರ ಪುರ್ವೆ ಅವರು, ಲಾಲೂ ಪ್ರಸಾದ್ ಯಾದವ್ ಅವರಿಗೆ ಎಲ್ಲರ ಆಶೀರ್ವಾದವಿದೆ, ನಮಗೆ ನ್ಯಾಯ ದೊರಕುತ್ತದೆ ಎಂದು ನಮಗೆ ನಂಬಿಕೆಯಿದೆ. ನಮ್ಮ ಮುಖ್ಯಸ್ಥ ಲಾಲೂ ಅವರು ನಾಳೆ ನಡೆಯಲಿರುವ ಆರ್'ಜೆಡಿ ಪಕ್ಷದ ಅತೀ ಮುಖ್ಯವಾದ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆಂದು ನನಗೆ ವಿಶ್ವಾಸವಿದೆ ಎಂದು ಹೇಳಿದ್ದಾರೆ.