ಕೇರಳ ಸಿಎಂ ಪಿಣರಾಯಿ ವಿಜಯನ್ ಮತ್ತು ಕಿಮ್ ಜಾಂಗ್ ಉನ್ (ಸಂಗ್ರಹ ಚಿತ್ರ)
ತಿರುವನಂತರಪುರ: ಇಡೀ ವಿಶ್ವವೇ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ವಿರುದ್ಧ ಕೆಂಡಾಮಂಡಲವಾಗಿದ್ದರೆ, ಇತ್ತ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಮಾತ್ರ ಸರ್ವಾಧಿಕಾರಿ ನಡೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ತಮ್ಮ ಕಲ್ಲಿಕೋಟೆಲ್ಲಿ ನಡೆದ ಸಿಪಿಐ-ಎಂ ಪಕ್ಷದ ಜಿಲ್ಲಾಮಟ್ಟದ ಸಭೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಪಿಣರಾಯಿ ವಿಜಯನ್ ಅವರು, ಅಮೆರಿಕದ ಸಾಮ್ರಾಜ್ಯಶಾಹಿ ನಡೆಯನ್ನು ಖಂಡಿಸಿದರು. ಅಲ್ಲದೆ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ನಡೆಯನ್ನು ಶ್ಲಾಘಿಸಿದ ವಿಜಯನ್, ಕಿಮ್ ಅಮೆರಿಕಕ್ಕೆ ಅವರದೇ ಧಾಟಿಯಲ್ಲಿ ಉತ್ತರಿಸುತ್ತಿದ್ದಾನೆ. ಸಾಮ್ರಾಜ್ಯಶಾಹಿ ರಾಷ್ಟ್ರಗಳಿಗೆ ಕಿಮ್ ಜಾಂಗ್ ಉನ್ ಪ್ರಬಲ ಪೈಪೋಟಿ ನೀಡುತ್ತಿದ್ದು, ಅಮೆರಿಕದಂತಹ ರಾಷ್ಟ್ರಗಳ ಕುರಿತು ಹೇಗೆ ನಡೆದುಕೊಳ್ಳಬೇಕು ಎನ್ನುವುದಕ್ಕೆ ಕಿಮ್ ಜಾಂಗ್ ಉನ್ ಉತ್ತಮ ಉದಾಹರಣೆ ಎಂದು ಹೇಳಿದ್ದಾರೆ.
ವಿಶ್ವ ಸಮುದಾಯದ ತೀವ್ರ ಒತ್ತಡದ ಹೊರತಾಗಿಯೂ ಉತ್ತರ ಕೊರಿಯಾ ತನ್ನ ಅಮೆರಿಕ ವಿರೋಧಿ ನಿಲುವನ್ನು ಬಲವಾಗಿ ಸಮರ್ಥಿಸಿಕೊಳ್ಳುತ್ತಿದೆ. ಆದರೆ ಸಾಮ್ರಾಜ್ಯಶಾಹಿಗಳ ವಿರುದ್ಧದ ಚೀನಾ ಹೋರಾಟ ನಿರೀಕ್ಷಿತ ಮಟ್ಟಕ್ಕೇರಿಲ್ಲ. ಚೀನಾ ದೇಶ ಅಮೆರಿಕ ವಿಚಾರದಲ್ಲಿ ರಕ್ಷಣಾತ್ಮಕ ನಡೆ ಇಡುತ್ತಿದೆ. ಆದರೆ ಜನರ ನಿರೀಕ್ಷೆಯನ್ನು ಚೀನಾ ತಲುಪುತಿಲ್ಲ ಎಂದು ವಿಜಯನ್ ಕಿಡಿಕಾರಿದ್ದಾರೆ.
ಇತ್ತೀಚೆಗಷ್ಟೇ ಉತ್ತರ ಕೊರಿಯಾ ಸರ್ವಾಧಿಕಾರಿ ಉನ್ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರಸ್ಪರ ಪರಮಾಣು ದಾಳಿ ಕುರಿತಂತೆ ಪರೋಕ್ಷ ಎಚ್ಚರಿಕೆ ನೀಡಿದ್ದರು.