ಅಗ್ನಿ ದುರಂತ ನಡೆದ ಪಬ್ (ಸಂಗ್ರಹ ಚಿತ್ರ)
ಮುಂಬೈ: ಮುಂಬೈನ ಕಮಲಾ ಮಿಲ್ಸ್ ನಲ್ಲಿ ಕಳೆದ ಡಿಸೆಂಬರ್ 29ರಂದು ನಡೆದಿದ್ದ ಭೀಕರ ಅಗ್ನಿ ಅವಘಡಕ್ಕೆ ಹುಕ್ಕಾ ವಿತರಣೆಯೇ ಕಾರಣ ಎಂದು ಹೇಳಲಾಗುತ್ತಿದೆ.
ಕಳೆದ ಡಿಸೆಂಬರ್ 29ರಂದು 14 ಜನರ ಸಾವಿಗೆ ಕಾರಣವಾಗಿದ್ದ ಮುಂಬೈನ ಕಮಲಾ ಮಿಲ್ಸ್ ಅಗ್ನಿ ದುರಂತ ಸಂಬಂಧ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಈ ಬಗ್ಗೆ ತಮ್ಮ ಪ್ರಾಥಮಿಕ ವರದಿ ನೀಡಿದ್ದು, ಅಗ್ನಿ ದುರಂತಕ್ಕೆ ಪಬ್ ನಲ್ಲಿ ಗ್ರಾಹಕರಿಗೆ ನೀಡಲಾಗುತ್ತಿದ್ದ ಹುಕ್ಕಾ ಕಾರಣ ಎಂದು ಶಂಕಿಸಲಾಗಿದೆ. ಅಧಿಕಾರಿಗಳು ಶಂಕಿಸಿರುವಂತೆ ಮೋಜೋಸ್ ಬಿಸ್ಟ್ರೋ ಪಬ್ ನಲ್ಲಿ ಗ್ರಾಹಕರಿಗೆ ಹುಕ್ಕಾ ವಿತರಣೆ ಮಾಡಲಾಗಿತ್ತು. ಗ್ರಾಹಕರ ಅಥವಾ ಸಿಬ್ಬಂದಿಗಳ ಅಜಾಗರೂಕತೆಯಿಂದಾಗಿ ಹುಕ್ಕಾ ನೆಲಹಾಸಿನ ಮೇಲೆ ಬಿದ್ದಿದ್ದು, ಇದನ್ನು ಯಾರೂ ಆರಂಭದಲ್ಲಿ ಗಮನಿಸಿಲ್ಲ.
ಸಣ್ಣದಾಗಿ ಆರಂಭಗೊಂಡ ಬೆಂಕಿ ಬಳಿಕ ನೋಡ ನೋಡುತ್ತಿದ್ದಂತೆಯೇ ಇಡೀ ಪಬ್ ಗೆ ವ್ಯಾಪಿಸಿದ್ದು, ಪಕ್ಕದಲ್ಲೇ ಇದ್ದ '1 ಅಬೋವ್' ಪಬ್ ಗೂ ವಿಸ್ತರಿಸಿದೆ. ಹೀಗಾಗಿ ಸಾಕಷ್ಟು ಸಾವು-ನೋವು ಸಂಭವಿಸಿರಬಹುದು ಎಂದು ಅಧಿಕಾರಿಗಳು ತಮ್ಮ ವರದಿಯಲ್ಲಿ ಶಂಕಿಸಿದ್ದಾರೆ. ಅಂದು ಸಾವಿಗೀಡಾದ ಬಹುತೇಕರು ಬೆಂಕಿಯಿಂದಲ್ಲದೇ ಬೆಂಕಿಯಿಂದ ದಟ್ಟವಾಗಿ ಹಬ್ಬಿದ್ದ ಹೊಗೆಯಿಂದಾಗಿ ಸಾವನ್ನಪ್ಪಿದ್ದಾರೆ ಎಂದು ವೈದ್ಯಕೀಯ ವರದಿಯಲ್ಲಿರುವ ಅಂಶಗಳನ್ನು ಕೂಡ ಅಧಿಕಾರಿಗಳು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಇದಲ್ಲದೆ ದುರಂತ ನಡೆದ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಮತ್ತು ಪಾರಾದ ಪ್ರತ್ಯಕ್ಷದರ್ಶಿಗಳು ನೀಡಿರುವ ಹೇಳಿಕೆಯಲ್ಲೂ ಉಭಯ ಪಬ್ ಗಳಲ್ಲಿ ಗ್ರಾಹಕರಿಗೆ ಹುಕ್ಕಾ ಸರ್ವ್ ಮಾಡಲಾಗಿತ್ತು ಎಂದು ಹೇಳಿದ್ದಾರೆ. ಆದರೆ ಅಧಿಕಾರಿಗಳು ಪಡೆದಿರುವ ಸರ್ಕಾರಿ ಮಾಹಿತಿಯಲ್ಲಿ ಪಬ್ ಮಾಲೀಕರು ಕೇವಲ ಪಬ್ ಮತ್ತು ರೆಸ್ಟೋರೆಂಟ್ ಗೆ ಮಾತ್ರ ಅನುಮತಿ ಪಡೆದಿದ್ದರು. ಆದರೆ ಹುಕ್ಕಾ ಮಾರಾಟ ಮಾಡುವ ಕುರಿತು ಅನುಮತಿ ಪಡೆದಿರಲಿಲ್ಲ ಎಂದು ಅಧಿಕಾರಿಗಳು ವರದಿಯಲ್ಲಿ ತಿಳಿಸಿದ್ದಾರೆ.
ಈಗಾಗಲೇ ಅಗ್ನಿ ದುರಂತ ಸಂಬಂಧ ಕೆಲ ಸಿಬ್ಬಂದಿಗಳನ್ನು ಬಂಧಿಸಲಾಗಿದ್ದು, ಅಗ್ನಿದುರಂತ ಸಂಬಂಧ ಪ್ರಕರಣವಲ್ಲದೇ ಇದೀಗ ಅಕ್ರಮ ಹುಕ್ಕಾ ಮಾರಾಟ ಸಂಬಂಧವೂ ಅಧಿಕಾರಿಗಳು ಪ್ರಕರಣ ದಾಖಲಿಸುವ ಸಾಧ್ಯತೆ ಇದೆ.