ನವದೆಹಲಿ: ಮಾಜಿ ರಾಷ್ಟ್ರಪತಿಗಳಾದ ಪ್ರತಿಭಾ ಪಾಟೀಲ್ ಮತ್ತು ಪ್ರಣವ್ ಮುಖರ್ಜಿ, ಮಾಜಿ ಪ್ರಧಾನಿಗಳಾದ ಎಚ್.ಡಿ.ದೇವೇಗೌಡ, ಅಟಲ್ ಬಿಹಾರಿ ವಾಜಪೇಯಿ ಮತ್ತು ಮನಮೋಹನ್ ಸಿಂಗ್ ಅವರಿಗೆ ದೆಹಲಿ ಸರ್ಕಾರ ನೀಡಿರುವ ಅಧಿಕೃತ ನಿವಾಸ ಸವಲತ್ತಿಗೆ ಕತ್ತರಿ ಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಮೂಲಗಳ ಪ್ರಕಾರ ಈ ಬಗ್ಗೆ ಮಾಜಿ ಸಾಲಿಸಿಟರ್ ಜನರಲ್ ಗೋಪಾಲ್ ಸುಬ್ರಹ್ಮಣ್ಯನ್ ಅವರು ಸುಪ್ರೀಂಕೋರ್ಟ್ ಗೆ ಸಲಹೆಯನ್ನು ನೀಡಿದ್ದು, ಆ ಸಲಹೆಯನ್ನು ಒಪ್ಪಿಕೊಂಡಲ್ಲಿ ಈ ಅತಿ ಗಣ್ಯರಿಗೆ ಒದಗಿಸಿದ ವಸತಿ ಸೌಲಭ್ಯವನ್ನು ದೆಹಲಿ ಸರ್ಕಾರ ವಾಪಸ್ ಪಡೆಯಬೇಕಾಗುತ್ತದೆ.
ಮಾಜಿ ಮುಖ್ಯಮಂತ್ರಿಗಳಿಗೆ ಅಧಿಕೃತ ನಿವಾಸ ನೀಡುವ ಸಂಬಂಧ ಉತ್ತರ ಪ್ರದೇಶ ಸರ್ಕಾರ ಜಾರಿಗೆ ತಂದ ಕಾನೂನನ್ನು ಪ್ರಶ್ನಿಸಿ ಲೋಕ ಪ್ರಹಾರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಸ್ವಯಂಸೇವಾ ಸಂಸ್ಥೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಿಟ್ಟಿನಲ್ಲಿ ನೆರವಾಗುವಂತೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ರಂಜನ್ ಗೊಗೋಯ್ ಹಾಗೂ ನವೀನ್ ಸಿಂಗ್ ಅವರನ್ನೊಳಗೊಂಡ ನ್ಯಾಯಪೀಠ, ಸುಬ್ರಹ್ಮಣಿಯನ್ ಅವರನ್ನು ಆ್ಯಮಿಕಸ್ ಕ್ಯೂರಿ ಆಗಿ ನೇಮಕ ಮಾಡಿತ್ತು. ಹಲವು ರಾಜ್ಯಗಳಲ್ಲಿ ಮತ್ತು ಕೇಂದ್ರದಲ್ಲಿ ಈ ಸಂಬಂದ ಕಾನೂನು ಇರುವ ಹಿನ್ನೆಲೆಯಲ್ಲಿ ಈ ಬಗ್ಗೆ ಸಮಗ್ರ ಅಧ್ಯಯನ ನೀಡಿ ಸಲಹೆ ನೀಡುವಂತೆ ನ್ಯಾಯಪೀಠ ಸೂಚಿಸಿತ್ತು.
ಸಂವಿಧಾನಾತ್ಮಕವಾಗಿ ಉನ್ನತ ಹುದ್ದೆಗಳನ್ನು ಹೊಂದಿದ ವ್ಯಕ್ತಿಗಳು ತಮ್ಮ ಅಧಿಕಾರಾವಧಿ ಮುಗಿದ ಬಳಿಕ ಸಾಮಾನ್ಯ ವ್ಯಕ್ತಿಗಳಾಗುವುದರಿಂದ ಅವರು ಅಧಿಕೃತ ನಿವಾಸ ತೆರವು ಮಾಡಬೇಕಾಗುತ್ತದೆ. ಇದು ಕೆಲ ಮಾಜಿ ಉನ್ನತ ವ್ಯಕ್ತಿಗಳ ಸ್ಮಾರಕಗಳಿಗೂ ಅನ್ವಯಿಸುತ್ತದೆ ಎಂದು ಸುಬ್ರಹ್ಮಣಿಯನ್ ಹೇಳಿದ್ದು, ಪ್ರಧಾನಿಯಾಗಲೀ, ರಾಷ್ಟ್ರಪತಿಯಾಗಲೀ ಒಂದು ಬಾರಿ ಅಧಿಕಾರದಿಂದ ನಿರ್ಗಮಿಸಿದ ಬಳಿಕ, ಸರ್ಕಾರಿ ಕಚೇರಿ ಅವರ ಪಾಲಿಗೆ ಇರುವುದಿಲ್ಲ. ಅವರು ಭಾರತದ ಇತರ ಸಾಮಾನ್ಯ ಪ್ರಜೆಗಳಂತೆ. ಆದ್ದರಿಂದ ವಿಶೇಷಾಧಿಕಾರ ಅಥವಾ ಸವಲತ್ತು ನೀಡುವ ಅಗತ್ಯವಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.
ಸುಬ್ರಹ್ಮಣಿಯನ್ ಅವರ ವಾದವನ್ನು ಸುಪ್ರೀಂ ಕೋರ್ಟ್ ಮನ್ನಣೆ ನೀಡಿದ್ದೇ ಆದಲ್ಲಿ ಮಾಜಿ ಪ್ರಧಾನಿಗಳು ಹಾಗೂ ಮಾಜಿ ಮುಖ್ಯಮಂತ್ರಿ, ಮಾಜಿ ರಾಷ್ಟ್ರಪತಿಗಳು ಅವರ ಅಧಿಕೃತ ನಿವಾಸಗಳಿಂದ ವಂಚಿತರಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos