ನವದೆಹಲಿ: ಭಾರತೀಯ ದಂಡ ಸಂಹಿತೆಯ 377ರಡಿ ಸಲಿಂಗಕಾಮ ಅಪರಾಧ ಎಂದು ಘೋಷಿಸಿದ್ದ ತನ್ನ ತೀರ್ಪನ್ನು ಮರು ಪರಿಶೀಲಿಸಲು ಸುಪ್ರೀಂ ಕೋರ್ಟ್ ಸೋಮವಾರ ಒಪ್ಪಿಗೆ ಸೂಚಿಸಿದ್ದು, ಅದನ್ನು ಉನ್ನತ ಪೀಠಕ್ಕೆ ಒಪ್ಪಿಸಿದೆ.
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ಎಎಂ ಖನ್ವಿಲ್ಕರ್ ಹಾಗೂ ಡಿವೈ ಚಂದ್ರಚೂಡ್ ಅವರನ್ನೊಳಗೊಂಡ ಸುಪ್ರೀಂ ಪೀಠ, ಸಲಿಂಗಕಾಮವನ್ನು ಭಾರತೀಯ ದಂಡ ಸಂಹಿತೆ 377ರಿಂದ ಹೊರಗಿಡುವ ಬಗ್ಗೆ ಉನ್ನತ ಪೀಠ ವಿಚಾರಣೆ ನಡೆಸಲಿದೆ ಎಂದಿದ್ದಾರೆ.
ಸಲಿಂಗಕಾಮವನ್ನು ಅಪರಾಧೀಕರಿಸುವ ಭಾರತೀಯ ದಂಡ ಸಂಹಿತೆಯ 377ನೇ ಸೆಕ್ಷನ್ ಮೇಲಿನ ತೀರ್ಪಿನ ಪುನರ್ ಪರಿಶೀಲಿಸಬೇಕು ಎಂದು ಕೋರಿ ಹೊಸದಾಗಿ ನವತೇಜ್ ಸಿಂಗ್ ಜೋಹರ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಅರ್ಜಿಯನ್ನು ಉನ್ನತ ಪೀಠಕ್ಕೆ ಒಪ್ಪಿಸಿದೆ.
ಐಪಿಸಿ ಸೆಕ್ಷನ್ 377ರಡಿ ಪರಸ್ಪರ ಸಮ್ಮತಿಯ ಸಲಿಂಗಕಾಮಕ್ಕೂ ಜೈಲಿ ಶಿಕ್ಷೆ ವಿಧಿಸುವುದು ಅಸಂವಿಧಾನಿಕ. ಅಸಹಜ ಲೈಂಗಿಕ ಕ್ರಿಯೆ ಆರೋಪದ ಮೇಲೆ ಇಬ್ಬರು ಯುವಕ ಅಥವಾ ಯುವತಿಯರನ್ನು ನೀವು ಜೈಲಿಗೆ ಕಳುಹಿಸಲು ಸಾಧ್ಯವಿಲ್ಲ ಎಂದು ಜೋಹರ್ ಪರ ವಕೀಲ ಅರವಿಂದ್ ದಾತರ್ ಅವರು ಹೇಳಿದ್ದಾರೆ.
2009ರಲ್ಲಿ ದೆಹಲಿ ಹೈಕೋರ್ಟ್ ಸಲಿಂಗಕಾಮವನ್ನು ಕಾನೂನುಬದ್ಧಗೊಳಿಸಿ ನೀಡಿದ್ದ ತೀರ್ಪನ್ನು 2013ರ ಡಿ.11ರಂದು ಅನೂರ್ಜಿಗೊಳಿಸಿದ್ದ ಸುಪ್ರೀಂ ಪೀಠ, ಸಲಿಂಗಕಾಮ ಅಪರಾಧ ಎಂದು ಷರಾ ಬರೆದಿತ್ತು. ಅಲ್ಲದೆ ಸಲಿಂಗಿ ಅಪರಾಧಗಳಿಗೆ ಜೀವಾವಧಿ ಶಿಕ್ಷೆವರೆಗೂ ದಂಡನೆ ವಿಧಿಸಬಹುದೆಂದು ತೀರ್ಪು ನೀಡಿತ್ತು.