ನವದೆಹಲಿ: ಅಕ್ರಮವಾಗಿ 3.25 ಕೋಟಿ ರುಪಾಯಿ ಮೌಲ್ಯದ ಅಮೆರಿಕನ್ ಡಾಲರ್ ಕರೆನ್ಸಿಗಳನ್ನು ಸಾಗಿಸುತ್ತಿದ್ದ ಆರೋಪದ ಮೇಲೆ ಜೆಟ್ ಏರ್ ವೇಸ್ ವಿಮಾನದ ಗಗನ ಪರಿಚಾರಿಕೆಯನ್ನು ಬಂಧಿಸಿದ್ದು, ಆರೋಪಿ ಜಾಗತಿಕ ಹವಾಲ ದಂಧೆ ನಡೆಸುತ್ತಿರುವ ಸಾಧ್ಯತೆ ಇದೆ ಎಂದು ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್ ಐ) ತಿಳಿಸಿದೆ.
ಜಾಗತಿಕ ಹವಾಲ ದಂಧೆಯ ಭಾಗವಾಗಿ ನಿನ್ನೆ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಾಂಕಾಂಗ್ ಗೆ ಹಾರಲಿದ್ದ ಜೆಟ್ ಏರ್ ವೇಸ್ ನ ವಿಮಾನದ ಮಹಿಳಾ ಅಟೆಂಡೆಂಟ್ ಅನ್ನು ಬಂಧಿಸಿರುವುದಾಗಿ ಡಿಆರ್ ಐ ಇಂದು ಪ್ರಕಟಣೆಯಲ್ಲಿ ತಿಳಿಸಿದೆ.
ಬಂಧಿತ ಪರಿಚಾರಿಕೆಯಿಂದ 3.25 ಕೋಟಿ ರುಪಾಯಿ ಮೌಲ್ಯದ 4,80, 200 ಅಮೆರಿಕ ಡಾಲರ್ ಅನ್ನು ಜಪ್ತಿ ಮಾಡಲಾಗಿದ್ದು, ವಿಚಾರಣೆ ವೇಳೆ ಆರೋಪಿ ಅಂತರಾಷ್ಟ್ರೀಯ ಹವಾಲ ದಂಧೆಯಲ್ಲಿ ತೊಡೆಗಿರುವುದು ಪತ್ತೆಯಾಗಿದೆ. ದೆಹಲಿ ಮೂಲದ ಹವಾಲ ದಂಧೆಕೋರನ ಮೂಲಕ ಆರೋಪಿ ಮಹಿಳೆ ಹಲವು ಬಾರಿ ವಿದೇಶಿ ಕರೆನ್ಸಿಯನ್ನು ಸಾಗಿಸಿದ್ದಾಳೆ ಎಂದು ಡಿಆರ್ ಐ ತಿಳಿಸಿದೆ.
ದೆಹಲಿ ಮೂಲದ ಹವಾಲ ದಂಧೆಕೋರ ವಿವೇಕ್ ವಿಹಾರ ನಿವಾಸಿ ಅಮಿತ್ ಮಲ್ಹೊತ್ರಾ ಎಂದು ಗುರುತಿಸಲಾಗಿದ್ದು, ಕಾನೂನು ಅನುಷ್ಠಾನ ಸಂಸ್ಥೆಯ ತನಿಖೆಯನ್ನು ಹಾಗೂ ಅದು ನೀಡುವ ಮಾಹಿತಿಗಳನ್ನು ಆಧರಿಸಿ ಜೆಟ್ ಏರ್ ವೇಸ್ ಮುಂದಿನ ಕ್ರಮ ತೆಗೆದುಕೊಳ್ಳಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬಂಧಿತ ಮಹಿಳಾ ಸಿಬಂದಿಯು ಕಪ್ಪು ಹಣವನ್ನು ವಿನಿಮಯಿಸಿ ದೇಶದೊಳಗೆ ಚಿನ್ನವನ್ನು ತರುವ ವಿಸ್ತೃತ ಯೋಜನೆಯ ಭಾಗವಾಗಿದ್ದಳು ಎಂದು ಅವರು ತಿಳಿಸಿದ್ದಾರೆ.
ಅಮಿತ್ ಮಲ್ಲೊತ್ರಾ ಕೆಲವು ಉದ್ಯಮಿಗಳಿಂದ ಹಣ ಪಡೆದು ವಿಮಾನಗಳ ಮೂಲಕ ಹೊರ ದೇಶಕ್ಕೆ ಸಾಗಿಸುತ್ತಿದ್ದರು. ಹೊರ ದೇಶಗಳಲ್ಲಿ ಚಿನ್ನ ಖರೀದಿಗಾಗಿ ಈ ಹಣ ರವಾನೆಯಾಗುತ್ತಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.