ನವದೆಹಲಿ: ಪ್ರಜಾಪ್ರಭುತ್ವದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮಾಧ್ಯಮದ ಅಭಿಪ್ರಾಯಕ್ಕೆ ಅವಕಾಶ ನೀಡಬೇಕು. ಕೆಲ ತಪ್ಪು ವರದಿಗಾಗಿ ಮಾನಹಾನಿ ಪ್ರಕರಣ ದಾಖಲಿಸಬಾರದು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಅಭಿಪ್ರಾಯಪಟ್ಟಿದೆ.
ಪತ್ರಕರ್ತರೊಬ್ಬರ ಮತ್ತು ಮಾಧ್ಯಮ ಸಂಸ್ಥೆಯ ವಿರುದ್ಧ ದಾಖಲಿಸಿದ್ದ ಮಾನಹಾನಿ ಪ್ರಕರಣವನ್ನು ರದ್ದುಗೊಳಿಸಿದ್ದ ಪಾಟ್ನಾ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಸುಪ್ರೀಂ ಪೀಠ, ಪ್ರಜಾಪ್ರಭುತ್ವದಲ್ಲಿ ನೀವು(ಅರ್ಜಿದಾರರು) ಸಹಿಸಿಕೊಳ್ಳುವುದಲ್ಲಿ ಕಲಿಯಬೇಕು. ಒಂದು ಹಗರಣದ ಬಗ್ಗೆ ವರದಿ ಮಾಡಬೇಕಾದರೆ ಕೆಲ ತಪ್ಪುಗಳು ನಡೆಯುತ್ತವೆ. ಆದರೂ ನಾವು ಮಾಧ್ಯಮಕ್ಕೆ ಸಂಪೂರ್ಣ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಬೇಕು ಎಂದಿದ್ದಾರೆ.
ಕೆಲ ತಪ್ಪು ವರದಿಗಾಗಿ ಮಾನಹಾನಿ ಪ್ರಕರಣ ದಾಖಲಿಸುವುದು ಸರಿಯಲ್ಲ. ಮಾನಹಾನಿ ಪ್ರಕರಣ ದಾಖಲಿಸಲು ಸಂವಿಧಾನದಲ್ಲಿ ಅವಕಾಶ ಇದೆ. ಆದರೆ ಹಗರಣಗಳ ಕುರಿತ ತಪ್ಪು ವರದಿ ಮಾನಹಾನಿ ಪ್ರಕರಣವಾಗುವುದಿಲ್ಲ ಎಂದು ಹೇಳಿ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಪತ್ರಕರ್ತರೊಬ್ಬರು ತಪ್ಪು ಮಾಹಿತಿ ಪ್ರಸಾರ ಮಾಡಿದ್ದು, ಇದರಿಂದ ತನ್ನ ಹಾಗೂ ಕುಟುಂಬದ ಗೌರವಕ್ಕೆ ಧಕ್ಕೆಯಾಗಿದೆ ಎಂದು ಆರೋಪಿಸಿ ಮಹಿಳೆಯೊಬ್ಬರು ಖಾಸಗಿ ಮಾನಹಾನಿ ಪ್ರಕರಣ ದಾಖಲಿಸಿದ್ದರು.