ಚಂಡೀಗಢ: ನಿವೃತ್ತ ಐಎಎಸ್ ಅಧಿಕಾರಿಯ ಪುತ್ರಿಯನ್ನು ಹಿಂಬಾಲಿಸಿ ಕಿರುಕುಳ ನೀಡಿದ ಆರೋಪದ ಮೇಲೆ ಜೈಲು ಪಾಲಾಗಿದ್ದ ಹರಿಯಾಣ ಬಿಜೆಪಿ ರಾಜ್ಯಾಧ್ಯಕ್ಷ ಸುಭಾಷ್ ಬರಾಲ ಅವರ ಪುತ್ರ ವಿಕಾಸ್ ಬರಾಲಗೆ ಹರಿಯಾಣ ಹೈಕೋರ್ಟ್ ಗುರುವಾರ ಜಾಮೀನು ಮಂಜೂರು ಮಾಡಿದೆ.
ಜಾಮೀನು ಕೋರಿ ವಿಕಾಸ್ ಬರಾಲ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಲಿಸಾ ಗಿಲ್ ಅವರು, ಆರೋಪಿಗೆ ಜಾಮೀನು ನೀಡಿದ್ದಾರೆ ಎಂದು ಬರಾಲ ಪರ ವಕೀಲ ವಿನೋದ್ ಗಾಯ್ ಅವರು ತಿಳಿಸಿದ್ದಾರೆ.
ಆಗಸ್ಟ್ 5ರಂದು ಯುವತಿ ಅಪಹರಣ ಯತ್ನ ಹಾಗೂ ಕಿರುಕಳ ನೀಡಿದ ಆರೋಪದ ಮೇಲೆ ವಿಕಾಸ್ ಬರಾಲ ಹಾಗೂ ಅವರ ಸ್ನೇಹಿತ ಅಶೋಕ್ ಕುಮಾರ್ ಅವರನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಜಾಮೀನು ಕೋರಿ ಆರೋಪಿಗಳು ಸಲ್ಲಿಸಿದ್ದ ಅರ್ಜಿಯನ್ನು ಜಿಲ್ಲಾ ಕೋರ್ಟ್ ವಜಾಗೊಳಿಸಿತ್ತು.
ಬಿಜೆಪಿ ನಾಯಕನ ಪುತ್ರ ಹಾಗೂ ಆತನ ಸ್ನೇಹಿತನ ವಿರುದ್ಧ ಐಪಿಸಿ ಸೆಕ್ಷೆನ್ 365 (ಅಪಹರಣ ಯತ್ನ) ಹಾಗೂ 511ರಡಿ ಜಾಮೀನು ರಹಿತ ಕೇಸ್ ದಾಖಲಿಸಿಕೊಳ್ಳಲಾಗಿದೆ.
ಚಂಡೀಗಢದ ಹೆದ್ದಾರಿಯಲ್ಲಿ ವಿಕಾಸ್ ಬರಾಲಾ ಹಾಗೂ ಆತನ ಸ್ನೇಹಿತ ಆಶೋಕ್ ಅವರು ನಿವೃತ್ತ ಐಎಎಸ್ ಅಧಿಕಾರಿಯ ಪುತ್ರಿ ವರ್ನಿಕಾ ಕುಂದು ಅವರ ಕಾರನ್ನು ಹಿಂಬಾಲಿಸಿದ್ದಲ್ಲದೇ, ಆಕೆಯನ್ನು ಅಪಹರಿಸಲು ಯತ್ನಿಸಿದ್ದರು. ಈ ಘಟನೆ ದೇಶದಾದ್ಯಂತ ಭಾರೀ ಸುದ್ದಿಗೆ ಗ್ರಾಸವಾಗಿತ್ತು.