ನವದೆಹಲಿ: ಶಾಸನಾತ್ಮಕ ಅಧಿಕಾರ ಉಳ್ಳ ರಾಜಕಾರಣಿಗಳ ವಕೀಲ ವೃತ್ತಿಯನ್ನು ಅಮಾನತುಗೊಳಿಸುವ ಕುರಿತು ಬಾರ್ ಕೌನ್ಸಿಲ್ ಆಫ್ ಇಂಡಿಯಾ ಗಂಭೀರ ಚಿಂತನೆಯಲ್ಲಿದೆ ಎಂದು ತಿಳಿದುಬಂದಿದೆ.
ಮಾಧ್ಯಮವೊಂದು ವರದಿ ಮಾಡಿರುವಂತೆ ಪ್ರಸ್ತುತ ರಾಜಕಾರಣದಲ್ಲಿ ಗುರುತಿಸಿಕೊಂಡಿರುವ ಮತ್ತು ಶಾಸನಾತ್ಮಕ ಅಧಿಕಾರ ಉಳ್ಳ ರಾಜಕಾರಣಿಗಳ ವಕೀಲ ವೃತ್ತಿಯನ್ನು ಅಮಾನತುಗೊಳಿಸುವ ಕುರಿತು ಬಾರ್ ಕೌನ್ಸಿಲ್ ಆಫ್ ಇಂಡಿಯಾ ಗಂಭೀರ ಚಿಂತನೆಯಲ್ಲಿದ್ದು, ಈ ಬಗ್ಗೆ ಜನವರಿ 22ರಂದು ಈ ಬಗ್ಗೆ ತನ್ನ ಅಂತಿಮ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಶಾಸನಾತ್ಮಕ ಅಧಿಕಾರ ಉಳ್ಳ ರಾಜಕಾರಣಿಗಳು ವಕೀಲಿ ವೃತ್ತಿಯಲ್ಲಿ ಮುಂದುವರಿಯಬೇಕೋ ಬೇಡವೋ ಎನ್ನುವುದನ್ನು ನಿರ್ಧರಿಸಲು ರಚನೆಯಾಗಿರುವ ಬಾರ್ ಕೌನ್ಸಿಲ್ ಆಫ್ ಇಂಡಿಯಾದ ತ್ರಿ ಸದಸ್ಯರ ತಜ್ಞರ ಸಮಿತಿಯು 500ಕ್ಕೂ ಹೆಚ್ಚು ಸಂಸದರು, ಶಾಸಕರು ಮತ್ತು ಕಾರ್ಪೊರೇಟರ್ ಗಳಿಗೆ ಬುಧವಾರ ನೋಟಿಸ್ ಜಾರಿ ಮಾಡಿದೆ.
ಶಾಸನಾತ್ಮಕ ಅಧಿಕಾರ ಹೊಂದಿದ ರಾಜಕಾರಣಿಗಳು ವಕೀಲ ವೃತ್ತಿಯಲ್ಲಿಯೂ ಮುಂದುವರಿಯುವುದರಿಂದ ಸಹಜ ನ್ಯಾಯದಾನ ವ್ಯವವಸ್ಥೆಗೆ ಅಡ್ಡಿಯಾಗುತ್ತದೆ ಎನ್ನುವ ಅಭಿಪ್ರಾಯಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಬಾರ್ ಕೌನ್ಸಿಲ್ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ. ಹೀಗಾಗಿ "ವಕೀಲ ವೃತ್ತಿಯಿಂದ ನಿಮ್ಮನ್ನು ಯಾಕೆ ಅಮಾನತುಗೊಳಿಸಬಾರದು ಎನ್ನುವುದಕ್ಕೆ ಒಂದು ವಾರದೊಳಗೆ ಸೂಕ್ತ ಪ್ರತಿಕ್ರಿಯೆ ತಿಳಿಸಿ" ಎಂದು ತಜ್ಞರ ಸಮಿತಿಯು ರಾಜಕಾರಣಿ ವಕೀಲರನ್ನು ನೋಟಿಸ್ ನಲ್ಲಿ ಪ್ರಶ್ನೆ ಮಾಡಿದೆ.
1996ರಲ್ಲಿಯೇಸುಪ್ರೀಂ ಕೋರ್ಟ್ ಈ ಬಗ್ಗೆ ಸ್ಪಷ್ಟ ತೀರ್ಪು ನೀಡಿದ್ದು, ''ಸರ್ಕಾರಿ ವೇತನ ಪಡೆಯುವ ಯಾವುದೇ ವ್ಯಕ್ತಿ, ಸಂಸ್ಥೆ, ಕಾರ್ಪೊರೇಷನ್ ಅಥವಾ ಸರ್ಕಾರವು ಯಾವುದೇ ಕೋರ್ಟ್‌ನಲ್ಲಿ ವಕೀಲ ವೃತ್ತಿ ನಿರ್ವಹಿಸುವಂತಿಲ್ಲ ಎಂದು ಹೇಳಿದೆ. ಈ ತೀರ್ಪನ್ನು ಆಧರಿಸಿ ಮತ್ತು ರಾಜಕಾರಣಿ ವಕೀಲರನ್ನು ಅಮಾನತುಗೊಳಿಸಬೇಕೆಂಬ ಕೋರಿಕೆ ಆಧರಿಸಿ ಬಾರ್ ಕೌನ್ಸಿಲ್, ಕಳೆದ ಡಿಸೆಂಬರ್ 21ರಂದು ಹಿರಿಯ ವಕೀಲ ಮನನ್ ಕುಮಾರ್ ಮಿಶ್ರಾ ನೇತೃತ್ವದಲ್ಲಿ ತ್ರಿ ಸದಸ್ಯ ತಜ್ಞರ ಸಮಿತಿ ರಚಿಸಿತ್ತು. ಇದೀಗ ವಕೀಲ ವೃತ್ತಿ ಹೊಂದಿರುವ ಜನ ಪ್ರತಿನಿದಿಗಳಿಗೆ ಸಮಿತಿ ನೋಟಿಸ್ ಜಾರಿ ಮಾಡಿದ್ದು, ''ನೋಂದಣಿಯನ್ನು ಬಾರ್ ಕೌನ್ಸಿಲ್ ರದ್ದುಗೊಳಿಸಿದ್ದೇ ಆದರೆ ಸಹಜ ನ್ಯಾಯದಾನದಡಿ ಅವರು ಯಾವುದೇ ಹಕ್ಕು ಪ್ರತಿಪಾದನೆ ಮಾಡುವಂತಿಲ್ಲ. ಈ ಹಿನ್ನೆಲೆಯಲ್ಲಿ ಜನಪ್ರತಿನಿಧಿ ವಕೀಲರಿಗೆ ನೋಟಿಸ್ ನೀಡಲಾಗಿದೆ,'' ಎಂದು ತಜ್ಞರ ಸಮಿತಿಯ ಅಧ್ಯಕ್ಷ ಹಾಗೂ ಹಿರಿಯ ವಕೀಲ ಮನನ್ ಕುಮಾರ್ ಮಿಶ್ರಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ತಜ್ಞರ ಸಮಿತಿಯ ನೋಟಿಸ್ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದು ಸಂಬಂಧಪಟ್ಟ ವಕೀಲರು ವಾರದೊಳಗೆ ತಮ್ಮ ಪ್ರತಿಕ್ರಿಯೆ ದಾಖಲಿಸಬೇಕಿದೆ. ಅಂತಿಮ ವಿಚಾರಣೆ ಜನವರಿ 22ರಂದು ನಡೆಯಲಿದೆ.
ಘಟಾನುಘಟಿ ನಾಯಕರ ವಕೀಲ ವೃತ್ತಿಗೆ ಕೋಕ್
ಇನ್ನು ತಜ್ಞರ ಸಮಿತಿ ನಿರ್ಧಾರದ ಮೇಲೆ ದೇಶದ ಘಟಾನುಘಟಿ ನಾಯಕರ ವಕೀಲ ವೃತ್ತಿ ಭವಿಷ್ಯ ಆಧಾರವಾಗಿದ್ದು, ಪಿ.ಚಿದಂಬರಂ, ಕಪಿಲ್ ಸಿಬಲ್, ಅಭಿಷೇಕ್ ಮನು ಸಿಂಜ್ವ , ಕೆಟಿಎಸ್ ತುಳಸಿ, ವಿವೇಕ್ ಟಂಖಾ, ಕೆ.ಪರಸರಣ್, ಭುಪೇಂದ್ರ ಯಾದವ್ ಮತ್ತು ಅಶ್ವಿನಿ ಕುಮಾರ್ ಅವರಿಗೂ ನೋಟಿಸ್ ಜಾರಿ ಮಾಡಲಾಗಿದೆ ಎನ್ನಲಾಗಿದೆ.