ದೇಶ

ಸುಪ್ರೀಂ ನ್ಯಾಯಾಧೀಶರ ನಡುವೆ ಸಂಧಾನಕ್ಕೆ 7 ಸದಸ್ಯರ ನಿಯೋಗ ರಚಿಸಿದ ಬಾರ್ ಕೌನ್ಸಿಲ್

Lingaraj Badiger
ನವದೆಹಲಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ಸುಪ್ರೀಂ ಕೋರ್ಟ್ ನಾಲ್ವರು ಹಿರಿಯ ನ್ಯಾಯಾಧೀಶರ ನಡುವಿನ ಭಿನ್ನಾಭಿಪ್ರಾಯ ಶಮನಕ್ಕೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ(ಬಿಸಿಐ) ಶನಿವಾರ ಏಳು ಸದಸ್ಯರ ನಿಯೋಗವನ್ನು ರಚನೆ ಮಾಡಿದೆ.
ಸುಪ್ರೀಂ ಕೋರ್ಟ್ ನ ನಾಲ್ವರು ನ್ಯಾಯಾಧೀಶರು ಮುಖ್ಯ ನ್ಯಾಯಾಧೀಶರ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಇಂದು ಬಾರ್ ಕೌನ್ಸಿಲ್ ಈ ನಿರ್ಧಾರಕ್ಕೆ ಬಂದಿದೆ.
ಬಾರ್ ಕೌನ್ಸಿಲ್ ಸಭೆ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಬಿಸಿಐ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಅವರು, ಸಂಧಾನಕ್ಕಾಗಿ ನಾವು ಏಳು ಸದಸ್ಯರ ನಿಯೋಗವೊಂದನ್ನು ರಚಿಸಿದ್ದು, ಈ ನಿಯೋಗ ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ಮತ್ತು ಮುಖ್ಯ ನ್ಯಾಯಾಧೀಶರನ್ನು ಭೇಟಿ ಮಾಡಲಿದೆ ಎಂದರು ತಿಳಿಸಿದರು.
ಇದೇ ವೇಳೆ ನ್ಯಾಯಾಧೀಶರ ದಂಗೆಯನ್ನು ರಾಜಕೀಯಗೊಳಿಸುತ್ತಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಮನನ್ ಅವರು, ಈ ವಿಷಯದಲ್ಲಿ ರಾಜಕೀಯ ಮಾಡಬೇಡಿ ಎಂದು ನಾನು ಬಾರ್ ಕೌನ್ಸಿಲ್ ಪರವಾಗಿ ರಾಜಕೀಯ ಪಕ್ಷಗಳಿಗೆ ಮನವಿ ಮಾಡುತ್ತೇನೆ ಎಂದರು.
ಸುಪ್ರೀಂ ಕೋರ್ಟ್‌ನ ಎರಡನೇ ಅತ್ಯಂತ ಹಿರಿಯ ನ್ಯಾಯಮೂರ್ತಿ ಜೆ. ಚಲಮೇಶ್ವರ್‌ ಮತ್ತು ನ್ಯಾಯಮೂರ್ತಿಗಳಾದ ರಂಜನ್‌ ಗೊಗೋಯ್‌, ಮದನ್‌ ಬಿ.ಲೋಕೂರ್‌ ಮತ್ತು ಕುರಿಯನ್‌ ಜೋಸೆಫ್‌ ಅವರು ನಿನ್ನೆ ಪತ್ರಿಕಾಗೋಷ್ಠಿ ನಡೆಸಿ, ಸುಪ್ರೀಂ ಕೋರ್ಟ್‌ನೊಳಗೆ ಹಲವು ಸಮಸ್ಯೆಗಳಿದ್ದು ಇದು ದೇಶದ ಅತ್ಯುನ್ನತ ನ್ಯಾಯ ಸಂಸ್ಥೆಯನ್ನು ಬಾಧಿಸುವುದರ ಜತೆಗೆ ದೇಶದ ಪ್ರಜಾತಂತ್ರವನ್ನೇ ಅಪಾಯಕ್ಕೆ ಒಡ್ಡಲಿದೆ ಎಂದು ಎಚ್ಚರಿಕೆ ನೀಡಿದ್ದರು.
SCROLL FOR NEXT