ದೇಶ

ನ್ಯಾಯಾಧೀಶರ ಸಮಸ್ಯೆ ಇತ್ಯರ್ಥ ಕುರಿತು ಭರವಸೆ: ಬಾರ್ ಕೌನ್ಸಿಲ್ ಆಫ್ ಇಂಡಿಯಾ

Sumana Upadhyaya
ನವದೆಹಲಿ: ಸುಪ್ರೀಂ ಕೋರ್ಟ್ ನ ನ್ಯಾಯಾಂಗ ವ್ಯವಸ್ಥೆಯಲ್ಲಿ ಬಿಕ್ಕಟ್ಟು ಉಂಟಾದ ಹಿನ್ನೆಲೆಯಲ್ಲಿ ತಮ್ಮ ಸದಸ್ಯರು 15 ಮಂದಿ ನ್ಯಾಯಾಧೀಶರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು ಸಮಸ್ಯೆ ಬಗೆಹರಿದಿದೆ ಎಂದು ಭರವಸೆ ನೀಡಿರುವುದಾಗಿ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಹೇಳಿದೆ.
ಕಹಾನಿ ಕತಂ ಹೋಗಯಾ(ಕಥೆ ಈಗ ಮುಗಿದಿದೆ) ಎಂದು ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ನ ನಾಲ್ವರು ನ್ಯಾಯಾಧೀಶರು, ಕೇಂದ್ರ ನ್ಯಾಯಾಲಯದಲ್ಲಿ ಕೆಲವು ಸಮಸ್ಯೆಗಳಿವೆ, ಕೇಸನ್ನು ನ್ಯಾಯಾಧೀಶರುಗಳಿಗೆ ವಹಿಸುವಲ್ಲಿ ಸಮಸ್ಯೆಗಳಾಗುತ್ತಿವೆ ಎಂದು ಕಳೆದ 12ರಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದರು. ಈ ವಿಷಯದಲ್ಲಿ ರಾಜಕೀಯ ಪಕ್ಷಗಳು ಮಧ್ಯಪ್ರವೇಶಿಸಿ ಅದರ ಲಾಭ ಪಡೆದುಕೊಳ್ಳಲು ಪ್ರಯತ್ನಿಸಬಾರದು ಎಂದು ಮನನ್ ಕುಮಾರ್ ಮನವಿ ಮಾಡಿದರು.
ನಾವು 15 ಮಂದಿ ನ್ಯಾಯಾಧೀಶರನ್ನು ಭೇಟಿ ಮಾಡಿದ್ದು, ವಿವಾದವನ್ನು ಬಗೆಹರಿಸಲಾಗಿದೆ ಎಂದು ಎಲ್ಲರೂ ಭರವಸೆ ನೀಡಿದ್ದಾರೆ ಎಂದರು.
ಕಳೆದ 12ರಂದು ಸುದ್ದಿಗೋಷ್ಠಿ ಕರೆದಿದ್ದ ನ್ಯಾಯಾಧೀಶರಾದ ಜೆ.ಚೆಲಮೇಶ್ವರ, ರಂಜನ್ ಗೊಗೊಯ್, ಮದನ್ ಬಿ ಲೋಕುರ್ ಮತ್ತು ಕುರಿಯನ್ ಜೋಸೆಫ್ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿ ಇಂದು ಕೋರ್ಟ್ ಕಾರ್ಯಕಲಾಪಗಳಿಗೆ ಹಾಜರಾಗಿದ್ದಾರೆ ಎಂದು ತಿಳಿಸಿದರು.
ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರನ್ನು ಸಾರ್ವಜನಿಕವಾಗಿ ಟೀಕಿಸಿರುವುದಕ್ಕೆ ನ್ಯಾಯಾಧೀಶರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಿರಾ ಎಂದು ಪತ್ರಕರ್ತರು ಕೇಳಿದಾಗ, ಯಾವುದೇ ಕ್ರಮ ತೆಗೆದುಕೊಳ್ಳುವ ಅಗತ್ಯವಿಲ್ಲ. ಅವರೆಲ್ಲರೂ ಪ್ರಾಮಾಣಿಕರಾಗಿದ್ದು ಸಮಗ್ರತೆಯನ್ನು ಕಾಪಾಡುವವರಾಗಿದ್ದಾರೆ ಎಂದು ಹೇಳಿದರು.
ನಿನ್ನೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಏಳು ಸದಸ್ಯರ ನಿಯೋಗ ಮತ್ತು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷ ವಿಕಾಸ್ ಸಿಂಗ್ ಅವರನ್ನು ಭೇಟಿ ಮಾಡಿ ಬಿಕ್ಕಟ್ಟನ್ನು ತಕ್ಷಣವೇ ಬಗೆಹರಿಸಿ ಸಾಮ್ಯತೆಯನ್ನು ಕಾಪಾಡಲಾಗುವುದು ಎಂದು ಭರವಸೆ ನೀಡಿದ್ದರು.
SCROLL FOR NEXT