ನವದೆಹಲಿ: ವಿಶೇಷ ಗುರುತಿನ ಚೀಟಿ ಆಧಾರ್ ಗುರುತುಗಳ ಪಟ್ಟಿಗೆ ಮತ್ತೊಂದು ಹೊಸ ವಿಧಾನ ಸೇರ್ಪಡೆಯಾಗುವ ಸಾಧ್ಯತೆ ಇದ್ದು, ಮುಖವನ್ನೂ ಕೂಡ ಗುರುತಿನ ಪಟ್ಟಿಗೆ ಸೇರಿಸಲು ವಿಶೇಷ ಗುರುತಿನ ಚೀಟಿ ಪ್ರಾಧಿಕಾರ (ಯುಐಎಡಿಐ) ಮುಂದಾಗಿದೆ.
ಮೂಲಗಳ ಪ್ರಕಾರ ಪ್ರಸ್ತುತ ಇರುವ ಬೆರಳು ಮತ್ತು ಕಣ್ಣಿನ ಸ್ಕ್ಯಾನಿಂಗ್ ನೊಂದಿಗೇ ಮುಖಚರ್ಯೆಯನ್ನೂ ಕೂಡ ಗುರುತಾಗಿ ಸೇರಿಸಲು ಆಧಾರ್ ಸಂಸ್ಥೆ ಮುಂದಾಗಿದೆ ಎನ್ನಲಾಗಿದೆ. ಬೆರಳುಗಳು ಹಾಗೂ ಕಣ್ಣಿನ ಗುರುತು ಸ್ಕ್ಯಾನಿಂಗ್ ನಲ್ಲಿ ತೊಂದರೆ ಅನುಭವಿಸುತ್ತಿರುವ ಆಧಾರ್ ಬಳಕೆದಾರರಿಗೆ ಮುಖ ಗುರುತು ದೃಢೀಕರಣ ಪರಿಚಯಿಸಲು ಭಾರತ ವಿಶಿಷ್ಟ ಗುರುತು ಪ್ರಾಧಿಕಾರ ನಿರ್ಧರಿಸಿದೆ ಎನ್ನಲಾಗಿದೆ. ಪ್ರಸ್ತುತ ಇರುವ ಗುರುತು ದೃಢೀಕರಣ ಆಯ್ಕೆಗಳೊಂದಿಗೆ ಮುಖ ಗುರುತು ಆಯ್ಕೆ ಕೂಡ ಇದೇ ವರ್ಷದ ಜುಲೈ 1ರಿಂದ ನೋಂದಾಯಿತ ಸಾಧನಗಳಲ್ಲಿ ದೊರೆಯಲಿದೆ. ಆದರೆ, ಮತ್ತೊಂದು ಗುರುತು ಪತ್ತೆ ಆಯ್ಕೆಯ ಜತೆಗೆ ಮಾತ್ರ ಈ ಹೊಸ ಆಯ್ಕೆಯನ್ನು ಬಳಸ ಬಹುದಾಗಿದೆ ಎಂದು ತಿಳಿದುಬಂದಿದೆ.
ಇತ್ತೀಚಿಗಷ್ಟೆ ಆಧಾರ್ ಕಾರ್ಡ್ ಮಾಹಿತಿಗಳು ಸೋರಿಕೆಯಾಗಿವೆ ಎಂಬ ಸುದ್ದಿ ಪ್ರಕಟವಾಗಿತ್ತು. ಇದರ ಬೆನ್ನಲ್ಲೇ ಯುಐಎಡಿಐ ಸಂಸ್ಥೆ ಆಧಾರ್ ಮಾಹಿತಿ ರಕ್ಷಣೆಗೆ ವರ್ಚುವಲ್ ಐಡಿ ಮೊರೆ ಹೋಗಿತ್ತು. ಅದಕ್ಕೆ ಇಂಬು ನೀಡುವಂತೆ ಇದೀಗ ಮುಖದ ಗುರುತನ್ನು ಆಧಾರ್ ಗೆ ಸೇರ್ಪಡೆ ಮಾಡಲು ಮುಂದಾಗಿದೆ.