ದೇಶ

'ಪದ್ಮಾವತ್'ಗೆ ಸಿಬಿಎಫ್ ಸಿ ಪ್ರಮಾಣಪತ್ರ ವಿರೋಧಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ 'ಸುಪ್ರೀಂ'

Srinivasamurthy VN
ನವದೆಹಲಿ: ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತ್ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಪ್ರಮಾಣ ಪತ್ರ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಕೆ ಮಾಡಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿ ಎಎಂ ಖಾನ್ವಿಲ್ಕರ್ ಮತ್ತು ಡಿವೈ ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠ ಅರ್ಜಿಯ ವಿಚಾರಣೆ ನಡೆಸಿದ್ದು, ಪದ್ಮಾವತ್ ಚಿತ್ರದಿಂದಾಗಿ ರಾಜ್ಯಗಳಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುತ್ತದೆ ಎಂಬ ಕಾರಣ ನೀಡಿ ಚಿತ್ರಕ್ಕೆ ನೀಡಲಾಗಿರುವ ಪ್ರಮಾಣಪತ್ರವನ್ನು ರದ್ದು ಪಡಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಅಂತೆಯೇ ಅರ್ಜಿದಾರರ ವಿರುದ್ಧ ಕಿಡಿಕಾರಿರುವ ಸುಪ್ರೀಂ ಕೋರ್ಟ್ ಕಾನೂನು ಸುವ್ಯವಸ್ಥೆಯ ರಕ್ಷಣೆ ರಾಜ್ಯ ಸರ್ಕಾರದ ಕೆಲಸವಾಗಿದೆ. ಅಂತೆಯೇ ಚಿತ್ರಕ್ಕೆ ಪ್ರಮಾಣ ಪತ್ರ ನೀಡುವುದು ಸಿಬಿಎಫ್ ಸಿ ಕೆಲಸ ಎಂದು ಸ್ಪಷ್ಟಪಡಿಸಿದೆ.
ಸೆನ್ಸಾರ್ ಮಂಡಳಿ ಚಿತ್ರವನ್ನು ಪರಿಶೀಲಿಸಿದ ಬಳಿಕವೇ ಪ್ರಮಾಣ ಪತ್ರ ನೀಡಿದೆ. ಹೀಗಿರುವಾಗ ಅದರ ಕೆಲಸದಲ್ಲಿ ನ್ಯಾಯಾಲಯ ಮಧ್ಯ ಪ್ರವೇಶ ಮಾಡುವುದಿಲ್ಲ. ಸಿಬಿಎಫ್ ಸಿ ತನ್ನ ಕೆಲಸವನ್ನು ಮಾಡಿದೆ. ಆದರೆ ರಾಜ್ಯ ಸರ್ಕಾರಗಳು ಕಾನೂನು ಸುವ್ಯವಸ್ಥೆಯ ರಕ್ಷಣೆ ಮಾಡುವುದು ಅವುಗಳ ಕರ್ತವ್ಯ ಎಂದು ಹೇಳುವ ಮೂಲಕ ಚಿತ್ರವನ್ನು ನಿಷೇಧಿಸಿರುವ ಬಿಜೆಪಿ ಸರ್ಕಾರಗಳ ವಿರುದ್ಧ ಪರೋಕ್ಷ ಕಿಡಿಕಾರಿದೆ.
ಈ ಹಿಂದೆ ಕರ್ಣಿ ಸೇನಾ, ರಜಪೂತ ರಾಜವಂಶಸ್ಥರು ಪದ್ಮಾವತ್ ಚಿತ್ರಕ್ಕ ವಿರೋಧ ವ್ಯಕ್ತಪಡಿಸಿದ್ದರು. ಅಂತೆಯೇ ವಕೀಲ ಎಂಎಲ್ ಶರ್ಮಾ ಎಂಬ ವಕೀಲರು ಚಿತ್ರಕ್ಕೆ ನೀಡಲಾಗಿರುವ ಪ್ರಮಾಣಪತ್ರವನ್ನು ರದ್ದು ಮಾಡುವಂತೆ ಅರ್ಜಿ ಸಲ್ಲಿಕೆ ಮಾಡಿದ್ದರು.
SCROLL FOR NEXT