ನವದೆಹಲಿ: ಲಾಭದಾಯಕ ಹುದ್ದೆ ಹೊಂದಿದ ಆರೋಪದ ಮೇಲೆ ಆಮ್ ಆದ್ಮಿ ಪಕ್ಷದ 20 ಶಾಸಕರನ್ನು ಅನರ್ಹಗೊಳಿಸರುವ ಚುನಾವಣಾ ಆಯೋಗವನ್ನು ಆಪ್ ಖಾಪ್ ಪಂಚಾಯ್ತಿಗೆ ಹೊಲಿಸಿದೆ. ಅಲ್ಲದೆ ಚುನಾವಣಾ ಆಯೋಗದ ನೂತನ ಆಯುಕ್ತ ಒ ಪಿ ರಾವತ್ ಅವರ ಬಿಜೆಪಿ ನಂಟನ್ನು ಪ್ರಶ್ನಿಸಿದೆ.
ಆಪ್ ಶಾಸಕರ ಲಾಭದಾಯಕ ಹುದ್ದೆ ಪ್ರಕರಣದ ವಿಚಾರಣೆ ನಡೆಸಲು ಸ್ವತಃ ರಾವತ್ ಆಕ್ಷೇಪ ವ್ಯಕ್ತಪಡಿಸಿದ್ದರು ಮತ್ತು ಅವರು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಸೇರಿದಂತೆ ಹಲವು ಬಿಜೆಪಿ ನಾಯಕರೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದಾರೆ ಎಂದು ಆಪ್ ವಕ್ತಾರ ರಾಘವ್ ಚಡ್ಡಾ ಅವರು ಆರೋಪಿಸಿದ್ದಾರೆ.
ಚುನಾವಣಾ ಆಯೋಗ ಖಾಪ್ ಪಂಚಾಯ್ತಿ ರೀತಿ ವರ್ತಿಸುತ್ತಿದೆ. ಯಾವುದೇ ವಿಚಾರಣೆ ನಡೆಸದೇ ಏಕಪಕ್ಷೀಯವಾಗಿ ತೀರ್ಪು ನೀಡುತ್ತಿದೆ ಎಂದು ಚಡ್ಡಾ ಅವರು ವಾಗ್ದಾಳಿ ನಡೆಸಿದ್ದಾರೆ.
ಕಳೆದ ಶುಕ್ರವಾರ ಎಎಪಿಯ 20 ಶಾಸಕರು ಲಾಭದಾಯಕ ಹುದ್ದೆ ಹೊಂದಿದ್ದು ಅವರ ಶಾಸಕತ್ವನ್ನು ಅನರ್ಹಗೊಳಿಸುವಂತೆ ರಾಷ್ಟ್ರಪತಿ ರಾಮನಾಥ್ ಕೊವಿಂದ್ ಅವರಿಗೆ ಶಿಫಾರಸು ಮಾಡಿತ್ತು. ಆಯೋಗದ ಶಿಫಾರಸಿಗೆ ರಾಷ್ಟ್ರಪತಿಗಳು ಶನಿವಾರ ಸಹಿ ಹಾಕಿದ್ದಾರೆ.
ಚುನಾವಣಾ ಆಯೋಗದ ಅನರ್ಹತೆಯನ್ನು ಪ್ರಶ್ನಿಸಿ ಈಗ ಆಪ್ ಶಾಸಕರು ದೆಹಲಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.