ಮುಂಬೈನಲ್ಲಿ ಕರ್ಣಿ ಸೇನೆಯ 50 ಬೆಂಬಲಿಗರ ಬಂಧನ
ಮುಂಬೈ: ಸಾಕಷ್ಟು ಚರ್ಚೆಗೆ, ವಿವಾದಕ್ಕೆ ಕಾರಣವಾಗಿರುವ ಸಂಜಯ್ ಲೀಲಾ ಭನ್ಸಾಲಿಯವರ ಚಿತ್ರ ಪದ್ಮಾವತ್ ನಾಳೆ ತೆರೆ ಕಾಣಲಿದೆ. ಈ ಹಿನ್ನೆಲೆಯಲ್ಲಿ ಚಿತ್ರ ಬಿಡುಗಡೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಕರ್ಣಿ ಸೇನಾ ಬೆಂಬಲಿಗರಾದ ಸುಮಾರು ಐವತ್ತು ಜನರನ್ನು ಮುಂಬೈ ಪೋಲೀಸರು ಬಂಧಿಸಿದ್ದಾರೆ.
"ನಾವು ಮುಂಬೈನ ವಿವಿಧ ಭಾಗಗಳಲ್ಲಿ ಸುಮಾರು 50 ಕರ್ಣಿ ಸೇನಾ ಬೆಂಬಲಿಗರನ್ನು ಬಂಧಿಸಿದ್ದೇವೆ, ಅವರು ಚಿತ್ರದ ವಿರುದ್ಧ ಪ್ರತಿಭಟಿಸಲು ಸಿದ್ದರಾಗಿದ್ದಾಗ ಅವರನ್ನು ಬಂಧಿಸಲಾಯಿತು" ಹಿರಿಯ ಪೋಲೀಸ್ ಅಧಿಕಾರಿಯೊಬ್ಬರು ಹೇಳಿದರು. ಪ್ರತಿಭಟನೆ ಕಾವು ಹೆಚ್ಚಾಗಿದ್ದ ಪಕ್ಷದಲ್ಲಿ ಇನ್ನಷ್ಟು ಜನರನ್ನು ವಶಕ್ಕೆ ಪಡೆಯಲಾಗುತ್ತದೆ ಎಂಡು ಅವರು ಹೇಳಿದ್ದಾರೆ.
ದೀಪಿಕಾ ಪಡುಕೋಣೆ, ರಣವೀರ್ ಸಿಂಗ್ ಹಾಗೂ ಶಾಹೀದ್ ಕಪೂರ್ ನಟಿಸಿದ್ದ ಈ ಚಿತ್ರ ಹದಿಮೂರನೇ ಶತಮಾನದ ರಜಪೂತ್ ರಾಣಿ ಪದ್ಮಿನಿಯ ಕಥೆಯನ್ನು ಹೊಂದಿದೆ ಎನ್ನಲಾಗಿದೆ. ಗುಜರಾತ್ ಮತ್ತು ರಾಜಸ್ಥಾನದಲ್ಲಿ ಹೊರತುಪಡಿಸಿ ದೇಶದ ಉಳಿದ ಭಾಗಗಳಲ್ಲಿ ಚಿತ್ರ ಬಿಡುಗಡೆಗೆ ಅವಕಾಶ ನೀಡಿ ಕಳೆದ ವಾರ ದೇಶದ ಸರ್ವೋಚ್ಚ ನ್ಯಾಯಾಲಯ ಆದೇಶ ಹೊರಡಿಸಿತ್ತು.