ನವದೆಹಲಿ: ಗೋ ರಕ್ಷಣೆ ಹೆಸರಲ್ಲಿ ದಾಳಿಗಳು ನಡೆಯುತ್ತಿದ್ದು ಈ ಬಗ್ಗೆ ವಿಶೇಷ ಸಮಿತಿಯನ್ನು ರಚನೆ ಮಾಡುವಂತೆ ಆದೇಶಿಸಿದ್ದರು ಇಲ್ಲಿಯವರೆಗೂ ಯಾವುದೇ ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಬಿಜೆಪಿ ಅಧಿಕಾರದಲ್ಲಿರುವ ಮೂರು ರಾಜ್ಯಗಳಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿದೆ.
ರಾಜಸ್ತಾನ, ಹರಿಯಾಣ ಮತ್ತು ಉತ್ತರಪ್ರದೇಶಗಳಲ್ಲಿ ಹೆಚ್ಚಾಗಿ ಪ್ರಕರಣಗಳು ವರದಿಯಾಗಿದ್ದು ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಈ ಹಿಂದೆ ಪ್ರಕರಣಗಳ ಕುರಿತು ಪರೀಕ್ಷಿಸಲು ವಿಶೇಷ ಸಮಿತಿಯೊಂದನ್ನು ರಚನೆ ಮಾಡುವಂತೆ ಆದೇಶಿಸಿತ್ತು. ಆದರೆ ಇಲ್ಲಿಯವರೆಗೂ ಮೂರು ರಾಜ್ಯಗಳು ಯಾವುದೇ ಕ್ರಮಗಳನ್ನು ಕೈಗೊಳ್ಳದ ಹಿನ್ನೆಲೆಯಲ್ಲಿ ನೋಟಿಸ್ ಜಾರಿ ಮಾಡಿದ್ದು ನೋಟಿಸ್ ಗೆ ಪ್ರತಿಕ್ರಿಯಿಸುವಂತೆ ಸೂಚಿಸಿದೆ.
ಸುಪ್ರೀ ಕೋರ್ಟ್ ಆದೇಶವಿದ್ದರೂ ಗೋ ರಕ್ಷಣೆ ಹೆಸರಲ್ಲಿ ಹಲ್ಲೆಗಳು ನಡೆಯುತ್ತಿವೆ. ಆದರೆ ರಾಜ್ಯ ಸರ್ಕಾರಗಳು ಈ ಹಲ್ಲೆಗಳನ್ನು ತಡೆಯಲು ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಅರ್ಜಿದಾರ ತುಷಾರ್ ಗಾಂಧಿ ಅವರು ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.
ಸಮಾಜದಲ್ಲಿ ಅಶಾಂತಿಗೆ ಕಾರಣವಾಗಿ ಗೋ ರಕ್ಷಣೆ ಹೆಸರಲ್ಲಿ ಹಲವು ಜೀವಗಳನ್ನು ಬಲಿಪಡೆದುಕೊಂಡಿರುವ ಗೋ ರಕ್ಷಕರು, ಗೋ ರಕ್ಷಣೆ ಹೆಸರಿನಲ್ಲಿ ನಡೆಸುವ ದಾಳಿಯನ್ನು ತಡೆಯಲು ಪ್ರತೀ ಜಿಲ್ಲೆಗೆ ಒಬ್ಬ ಹಿರಿಯ ಪೊಲೀಸ್ ಅಧಿಕಾರಿಯನ್ನು ನೇಮಿಸುವಂತೆ ಸುಪ್ರೀಂಕೋರ್ಟ್ ಸೆಪ್ಟೆಂಬರ್ ತಿಂಗಳಲ್ಲಿ ರಾಜ್ಯ ಸರ್ಕಾರಗಳಿಗೆ ಆದೇಶ ನೀಡಿತ್ತು.
ಗೋ ರಕ್ಷಣೆ ಹೆಸರಿನಲ್ಲಿ ದಾಳಿಗೆ ಒಳಗಾದವರಿಗೆ ರಾಜ್ಯ ಸರ್ಕಾರಗಳು ಸೂಕ್ತ ಪರಿಹಾರ ನೀಡಬೇಕೆಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಅವರಿದ್ದ ನ್ಯಾಯಪೀಠ ಆದೇಶಿಸಿತ್ತು. ಜಾನುವಾರು ಸಾಗಣೆಯನ್ನು ಗುರಿಯಾಗಿಸಿಕೊಂಡು ಹೆದ್ದಾರಿಗಳಲ್ಲಿ ನಡೆಯುವ ದಾಳಿಗಳನ್ನು ತಡೆಯಲು ರಾಜ್ಯ ಸರ್ಕಾರಗಳು ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಲಿದೆ ಎಂಬ ಬಗ್ಗೆಯೂ ವರದಿ ಸಲ್ಲಿಸಲು ನ್ಯಾಯಪೀಠ ಸೂಚನೆ ನೀಡಿತ್ತು.