ನವದೆಹಲಿ: ಭಾರತದ ಪಾಸ್ ಪೋರ್ಟ್ ನ ಬಣ್ಣ ಬದಲಿಸುವ ನಿರ್ಧಾರದಿಂದ ಕೇಂದ್ರ ಸರ್ಕಾರ ಹಿಂದೆ ಸರಿದಿದ್ದು, ಹತ್ತನೇ ತರಗತಿ ಉತ್ತೀರ್ಣರಾಗದವರಿಗೆ ಕಿತ್ತಳೆ ಬಣ್ಣದ ಪ್ರತ್ಯೇಕ ಪಾಸ್ ಪೋರ್ಟ್ ವಿತರಿಸುವ ಯೋಚನೆಯನ್ನು ಕೈಬಿಟ್ಟಿದೆ.
ಈ ಬಗ್ಗೆ ಮಂಗಳವಾರ ಕೇಂದ್ರ ಸರ್ಕಾರ ಮಾಹಿತಿ ನೀಡಿದ್ದು, ಹತ್ತನೇ ತರಗತಿ ಉತ್ತೀರ್ಣರಾಗದವರಿಗೆ ಕಿತ್ತಳೆ ಬಣ್ಣದ ಪ್ರತ್ಯೇಕ ಪಾಸ್ ಪೋರ್ಟ್ ವಿತರಿಸುವ ನಿರ್ಧಾರದಿಂದ ಹಿಂದೆ ಸರಿದಿದೆ. ಅಲ್ಲದೆ, ಪಾಸ್ ಪೋರ್ಟ್‌ನ ಕೊನೆಯ ಪುಟದಲ್ಲಿ ವಿಳಾಸ ಹಾಗೂ ಇನ್ನಿತರ ಮಾಹಿತಿ ಮುದ್ರಿಸದಿರುವ ನಿರ್ಧಾರದಿಂದಲೂ ಸರ್ಕಾರ ಹಿಂದೆ ಸರಿದಿದೆ ಎಂದು ಹೇಳಲಾಗಿದೆ. ಪ್ರಸ್ತುತ ಚಾಲ್ತಿಯಲ್ಲಿರುವಂತೆ ಕೊನೆಯ ಪುಟದಲ್ಲಿ ವಿಳಾಸ ಹಾಗೂ ಇನ್ನಿತರ ಮಾಹಿತಿ ಮುದ್ರಿಸುವ ಪದ್ಧತಿ ಮುಂದುವರಿಸುವುದಾಗಿ ವಿದೇಶಾಂಗ ಸಚಿವಾಲಯ ಮಂಗಳವಾರ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದೆ.
ಇನ್ನು ಪಾಸ್ ಪೋರ್ಟ್‌ನ ಕೊನೆಯ ಪುಟದಲ್ಲಿ ತಂದೆ, ತಾಯಿ, ಸಂಗಾತಿಯ ಹೆಸರು ಹಾಗೂ ವಿಳಾಸ ಮುದ್ರಿಸಲಾಗುತ್ತಿದ್ದು, ಇದನ್ನು ವಿಳಾಸ ದೃಢೀಕರಣ ದಾಖಲೆಯಾಗಿ ಬಳಸಲಾಗುತ್ತಿದೆ. 10ನೇ ತರಗತಿ ಉತ್ತೀರ್ಣರಾಗದವರಿಗೆ ಕಿತ್ತಳೆ ಬಣ್ಣದ ಪಾಸ್ ಪೋರ್ಟ್ ನೀಡಲು ಕೇಂದ್ರ ಸರ್ಕಾರ ಈ ಹಿಂದೆ ಚಿಂತನೆ ನಡೆಸಿತ್ತು. ವಿದೇಶಗಳಲ್ಲಿ ಭಾರತೀಯ ಕಾರ್ಮಿಕರ ಶೋಷಣೆ ತಪ್ಪಿಸುವುದು ಇದರ ಉದ್ದೇಶವಾಗಿತ್ತು. ಅಂತೆಯೇ ವಿದೇಶಾಂಗ ಸಚಿವಾಲಯ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಅಧಿಕಾರಿಗಳನ್ನು ಒಳಗೊಂಡ ಮೂವರು ಸದಸ್ಯರ ಸಮಿತಿ, ಪಾಸ್‌ಪೋರ್ಟ್ ಕೊನೆಯ ಪುಟದಲ್ಲಿ ತಂದೆಯ ಹೆಸರು ನಮೂದಿಸುವ ಅಗತ್ಯವಿಲ್ಲ ಎಂದು ವರದಿ ನೀಡಿತ್ತು. ಈ ವರದಿ ಆಧರಿಸಿ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪಾಸ್ ಪೋರ್ಟ್ ಕೊನೆಯ ಪುಟದಲ್ಲಿ ವಿಳಾಸ ಮುದ್ರಿಸುವ ಪರಿಪಾಠ ಕೈಬಿಡಲು ಮುಂದಾಗಿತ್ತು. ಆದರೆ ಸರ್ಕಾರದ ನಿರ್ಧಾರಕ್ಕೆ ವ್ಯಾಪಕ ಪರ-ವಿರೋಧ ಚರ್ಚೆಗಳು ಕೇಳಿ ಬಂದಿದ್ದವು.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಹಲವರು ಸರ್ಕಾರದ ಈ ನಿರ್ಧಾರಕ್ಕೆ ಆಕ್ಷೇಪ ಎತ್ತಿದ್ದಲ್ಲದೇ ಪ್ರತ್ಯೇಕ ಕಿತ್ತಳೆ ಬಣ್ಣದ ಪಾಸ್ ಪೋರ್ಟ್ ಬಡವರು ಮತ್ತು ಅನಕ್ಷರಸ್ಥ ಕಾರ್ಮಿಕರ ತಾರತಮ್ಯಕ್ಕೆ ದಾರಿ ಮಾಡಿಕೊಡಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು. ಹೀಗಾಗಿ ಹೆಚ್ಚುತ್ತಿರುವ ವಿರೋಧಕ್ಕೆ ಮಣಿದ ಸರ್ಕಾರ ಇದೀಗ ತನ್ನ ಈ ಎರಡೂ ನಿರ್ಧಾರಗಳನ್ನು ಕೈಬಿಟ್ಟಿದೆ.
ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸದ್ಯ ಮೂರು ಬಣ್ಣಗಳಲ್ಲಿ ಪಾಸ್‌ಪೋರ್ಟ್ ವಿತರಿಸುತ್ತಿದೆ. ಅಧಿಕಾರಿಗಳಿಗೆ ಬಿಳಿ, ರಾಜತಾಂತ್ರಿಕರಿಗೆ ಕೆಂಪು ಮತ್ತು ಇತರರಿಗೆ ನೀಲಿ ಬಣ್ಣದ ಪಾಸ್‌ಪೋರ್ಟ್ ವಿತರಿಸುತ್ತಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos