ದೇಶ

ಟ್ವಿಟ್ಟರ್ ತೊರೆಯುವುದಾಗಿ 'ಬಿಗ್ ಬಿ' ಬೆದರಿಕೆಯೊಡ್ಡಿದ್ದೇಕೆ? ಕಾರಣ ಇಲ್ಲಿದೆ

Sumana Upadhyaya
ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಟ್ವಿಟ್ಟರ್ ತೊರೆಯುತ್ತಾರಂತೆ. ಹೀಗಂತ ಬೆದರಿಕೆಯೊಡ್ಡಿ ತಮ್ಮ ಲಕ್ಷಾಂತರ ಅಭಿಮಾನಿಗಳಲ್ಲಿ ಒಂದು ಕ್ಷಣ ಗಾಬರಿಹುಟ್ಟಿಸಿದರು ಬಿಗ್ ಬಿ. ಇದಕ್ಕೆ ಏನು ಕಾರಣ ಎಂದು ಕೇಳಿದರೆ ಟ್ವಿಟ್ಟರ್ ನಲ್ಲಿ ಅವರ ಅನುಯಾಯಿಗಳ ಸಂಖ್ಯೆ ಕಡಿಮೆಯಾಗಿರುವುದು. 
ಬಾಲಿವುಡ್ ನ ಆಂಗ್ರಿ ಯಂಗ್ ಮ್ಯಾನ್ ಎಂದು ಹೆಸರಾಗಿರುವ ಅಮಿತಾಬ್ ಬಚ್ಚನ್ ಅವರನ್ನು ಬಾದ್ ಶಾ ಶಾರೂಕ್ ಖಾನ್ ಅವರು ಟ್ವಿಟ್ಟರ್ ನಲ್ಲಿ ಅನುಯಾಯಿಗಳ ಸಂಖ್ಯೆಯಲ್ಲಿ ಹಿಂದಿಕ್ಕಿದ್ದಾರೆ. 
ಟ್ವಿಟ್ಟರ್ ನಲ್ಲಿ ತಮ್ಮ ಅನುಯಾಯಿಗಳ ಸಂಖ್ಯೆಯನ್ನು ಕಡಿಮೆ ಮಾಡಿರುವುದರಿಂದ ನಾನು ಟ್ವಿಟ್ಟರ್ ತೊರೆಯುತ್ತೇನೆ, ಇಷ್ಟು ದಿನದ ಪ್ರಯಾಣಕ್ಕೆ ಧನ್ಯವಾದಗಳು ಎಂದು ಬೆದರಿಕೆ ಹಾಕಿ ನಂತರ ತಮಾಷೆಗೆ ಹೇಳಿದೆ ಎಂಬ ಪೋಸ್ಟರ್ ನ್ನು ಬಿಗ್ ಬಿ ನಿನ್ನೆ ಹಾಕಿದ್ದಾರೆ.
ಬಾಲಿವುಡ್ ಬಾದ್ ಶಾ ಶಾರೂಕ್ ಖಾನ್ ಅವರ ಅನುಯಾಯಿಗಳ ಸಂಖ್ಯೆ 3,29,44,338 ಇದ್ದರೆ ಅಮಿತಾಬ್ ಬಚ್ಚನ್ ಅವರ ಅನುಯಾಯಿಗಳ ಸಂಖ್ಯೆ 3,29,02,353 ಇದೆ. ಇದುವರೆಗೆ ಅಮಿತಾ ಬಚ್ಚನ್ ಅವರು ಬಾಲಿವುಡ್ ನಲ್ಲಿ ಅತಿ ಹೆಚ್ಚು ಟ್ವಿಟ್ಟರ್ ನಲ್ಲಿ ಅನುಯಾಯಿಗಳನ್ನು ಹೊಂದಿದವರಾಗಿದ್ದರು. ಇದೀಗ ಶಾರೂಕ್ ಖಾನ್ ಗೆ ನಂ.1 ಪಟ್ಟ ಸಿಕ್ಕಿದೆ. 
ಕಳೆದ ಶನಿವಾರ ವಿಶ್ವಾದ್ಯಂತ ಹಲವು ಗಣ್ಯರು ಸಾಮಾಜಿಕ ತಾಣದಲ್ಲಿ ಲಕ್ಷಾಂತರ ಮಂದಿ ಅನುಯಾಯಿಗಳ ಸಂಖ್ಯೆಯನ್ನು  ಕಳೆದುಕೊಂಡಿದ್ದರು. ಅಮೆರಿಕಾದ ಫೆಡರಲ್ ಮತ್ತು ಸ್ಟೇಟ್ ಏಜೆನ್ಸಿಗಳು ನಕಲಿ ಅನುಯಾಯಿಗಳನ್ನು ಪತ್ತೆಹಚ್ಚಿ ಕ್ರಮ ತೆಗೆದುಕೊಳ್ಳಲು ಮುಂದಾಗಿತ್ತು. ನ್ಯೂಯಾರ್ಕ್ ಟೈಮ್ಸ್ ನಲ್ಲಿ ವರದಿಯೊಂದು ಬಂದ ನಂತರ ತನಿಖೆಯನ್ನು ಆರಂಭಿಸಲಾಗಿತ್ತು. ನಕಲಿ ಅನುಯಾಯಿಗಳನ್ನು ಡೆವುಮಿ ಎಂಬ ಕಂಪೆನಿ ಸೃಷ್ಟಿಸುತ್ತದೆ. ಇಂತಹ ನಕಲಿ ಕಂಪೆನಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಟ್ವಿಟ್ಟರ್ ಕಳೆದ ಶನಿವಾರ ಹೇಳಿತ್ತು.
ಭಾರತದಲ್ಲಿ ಅಮಿತಾಬ್ ಬಚ್ಚನ್ ಅವರ ಟ್ವಿಟ್ಟರ್ ಖಾತೆಯಿಂದ ಇಂತಹ ನಕಲಿ ಅನುಯಾಯಿಗಳನ್ನು ತೆಗೆದುಹಾಕಿರಬಹುದು ಎಂದು ವಿಶ್ಲೇಷಿಸಲಾಗಿದೆ. ಅವರು ಸುಮಾರು 60,000 ಅನುಯಾಯಿಗಳನ್ನು ಟ್ವಿಟ್ಟರ್ ನಲ್ಲಿ ಕಳೆದುಕೊಂಡಿದ್ದಾರೆ.
SCROLL FOR NEXT