ರಾಜನಾಥ್ ಸಿಂಗ್ ಜತೆಗಿನ ಫೋಟೋಗಾಗಿ ಮೂರು ಗಂಟೆ ಕಾದ ಅಂಗವಿಕಲ ಮಕ್ಕಳು
ಚಂಡೀಗಡ: ಗೃಹ ಸಚಿವ ರಾಜನಾಥ ಸಿಂಗ್ ಅವರೊಡನೆ ಫೋಟೋ ತೆಗೆದುಕೊಳ್ಳುವುದಕ್ಕಾಗಿ ಅಂಗವಿಕಲ ಮಕ್ಕಳನ್ನು ಮೂರು ಗಂಟೆಗಳ ಕಾಲ ಕಾಯಿಸಿರುವ ಘಟನೆ ಚಂಡೀಗಡದಲ್ಲಿ ವರದಿಯಾಗಿದೆ.
ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಈ ಪ್ರಕರಣ ನಡೆದಿದ್ದು ಸ್ನಾತಕೋತ್ತರ ಪದವಿ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ (ಪಿಜಿಐಎಂಇಆರ್) ಯಲ್ಲಿ ಅಂಗವಿಕಲರು ಹಾಗೂ ಮಕ್ಕಳಿಗಾಗಿ 300 ಹಾಸಿಗೆ ಸಾಮರ್ಥ್ಯದ ಕೇಂದ್ರವನ್ನು ಉದ್ಘಾಟಿಸಲು ರಾಜನಾಥ್ ಸಿಂಗ್ ಆಗಮಿಸಿದ್ದರ. ಇದೇ ಸಂದರ್ಭದಲ್ಲಿ ಅಂಗವಿಕಲರಿಗೆ ಉಚಿತವಾಗಿ ವ್ಹೀಲ್ ಚೇರ್ ವಿತರಣೆ ಮಾಡಲಾಗಿತ್ತು.
ಬೆಳಗ್ಗೆ ಹನ್ನೊಂದಕ್ಕೆ ಕಾರ್ಯ್ಕಕ್ರಮ ನಿಗದಿಯಾಗಿದ್ದು ಸಚಿವರು 11.30ಕ್ಕೆ ಸ್ಥಳಕ್ಕೆ ಆಗಮಿಸಿದ್ದರು. ಸಚಿವ ರಾಜನಾಥ ಸಿಂಗ್ ಭೇಟಿಗಾಗಿ ಬಿಸಿಲಿನಲ್ಲಿ ಕಾದು ನಿಂತಿದ್ದ ಅಂಗವಿಕಲ ವಿದ್ಯಾರ್ಥಿಗಳು ದಣಿದ ಕಾರಣ ನಿರ್ಗಮಿಸಲು ಮುಂದಾಗಿದ್ದರು. ಆದರೆ ಕಾರ್ಯಕ್ರಮ ಆಯೋಜಕರು ಸಚಿವರು ಂದು ಕಾರ್ಯಕ್ರಮ ಮುಗಿಯುವವರೆಗೆ ಯಾರೂ ಹಿಂತಿರುಗುವಂತಿಲ್ಲ ಎಂದು ಪ್ರತಿಬಂಧಿಸಿದ್ದಾರೆ.
ಬೆಳಗ್ಗೆ ಒಂಭತ್ತು ಗಂಟೆಯಿಂದ ಸಚಿವರ ಕಾರ್ಯಕ್ರಮಕ್ಕೆ ಆಗಮಿಸಿ ಕಾದು ಕುಳಿತಿದ್ದ ಎರಡು ವರ್ಷದ ಮಗುವಿನ ತಾಯಿಯೊಬ್ಬಳು "ನನ್ನ ಮಗು ಹಸಿವಿನಿಂದ ಅಳುತ್ತಿದೆ, ಇನ್ನೂ ಎಷ್ಟು ಸಮಯದಲ್ಲಿ ಕಾರ್ಯಕ್ರಮ ಪ್ರಾರಂಬವೆನ್ನುವುದನ್ನು ಯಾರಾದರೂ ತಿಳಿಸಿದ್ದರೆ ನಾನು ಹೊರ ಹೋಗಿ ಅವನಿಗೆ ತಿನ್ನಲೇನಾದರೂ ತರುವವಳಿದ್ದೆ" ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
"ನಾಲ್ಕು ವರ್ಷದ ನನ್ನ ಮಗನಿಗೆ ಹೆಚ್ಚು ಸಮಯ ಕುಳಿತಿರಲು ಸಾಧ್ಯವಿಲ್ಲ. ನೋವು ತಾಳಲಾರದೆ ಅಳುತ್ತಾನೆ. ಇಲ್ಲಿಂದ ಹೋಗುತ್ತೇನೆಂದರೆ ಅಧಿಕಾರಿಗಳು ಬಿಡುತ್ತಿಲ್ಲ. ಸಚಿವರಿಗಾಗಿ ಕಾಯುತ್ತಾ ಕುಳಿತುಕೊಳ್ಳಬೇಕಾಗಿದೆ. ಲಾರ್ಯಕ್ರಮ ಆಯೋಜಕರು ಸಚಿವರ ಆಗಮನಕ್ಕೆ ಈ ರೀತಿ ಮಕ್ಕಳನ್ನು ಕಾಯಿಸಲು ಮುಂದಾಗಬಾರದಿತ್ತು" ನಾಲ್ಕು ವರ್ಷದ ಅಂಗವಿಕಲ ಗಂಡು ಮಗುವಿನ ತಂದೆಯೊಬ್ಬರು ವಿಷಾದದಿಂದ ನುಡಿದರು.