ದೇಶ

ಐಎನ್ ಎಕ್ಸ್ ಮೀಡಿಯಾ ಪ್ರಕರಣ: ಚಿದಂಬರಂ ಬಂಧನಕ್ಕೆ ತಡೆಯಾಜ್ಞೆ ಆ.1ಕ್ಕೆ ವಿಸ್ತರಣೆ

Sumana Upadhyaya
ನವದೆಹಲಿ: ಐಎನ್ ಎಕ್ಸ್ ಮೀಡಿಯಾ ವಂಚನೆ ಪ್ರಕರಣದಲ್ಲಿ ಕೇಂದ್ರದ ಮಾಜಿ ಸಚಿವ ಪಿ ಚಿದಂಬರಂ ವಿರುದ್ಧ ಹೊರಡಿಸಲಾಗಿದ್ದ ಬಂಧನ ಆದೇಶಕ್ಕೆ ತಡೆಯಾಜ್ಞೆ ನೀಡಿದ್ದ ದೆಹಲಿ ಹೈಕೋರ್ಟ್  ಆಗಸ್ಟ್ 1ರವರೆಗೆ ವಿಸ್ತರಿಸಿದೆ.
ನ್ಯಾಯಮೂರ್ತಿ ಎ ಕೆ ಪಾಠಕ್ ಈ ಹಿಂದೆ ಇಂದಿನವರೆಗೆ ಮಧ್ಯಂತರ ತಡೆಯಾಜ್ಞೆಯನ್ನು ತಂದಿದ್ದರು. ಇದೀಗ ಇನ್ನೂ ಒಂದು ತಿಂಗಳವರೆಗೆ ವಿಸ್ತರಿಸಿ ಚಿದಂಬರಂ ಅವರಿಗೆ ತಾತ್ಕಾಲಿಕ ನಿರಾಳತೆ ನೀಡಿದ್ದಾರೆ.
ಕಳೆದ ಮೇ 31ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್ ಚಿದಂಬರಂ ಅವರನ್ನು ಸಿಬಿಐ ವಿಚಾರಣೆಗೆ ಕರೆದಾಗ ಬಂದು ತನಿಖೆಗೆ ಸಹಕಾರ ನೀಡಬೇಕೆಂದು ಆದೇಶಿಸಿತ್ತು. ಕಳೆದ ಬಾರಿ ವಿಚಾರಣೆ ವೇಳೆ ಚಿದಂಬರಂಗೆ ನಿರೀಕ್ಷಣಾ ಜಾಮೀನು ನೀಡುವುದನ್ನು ವಿರೋಧಿಸಿದ್ದ ಸಿಬಿಐ ಕೇಸಿನಿಂದ ಬಿಡುಗಡೆ ಬೇಕಾದರೆ ಚಿದಂಬರಂ ಅವರು ಹೈಕೋರ್ಟ್ ಗೆ ಬದಲು ಮೊದಲು ವಿಚಾರಣಾ ನ್ಯಾಯಾಲಯವನ್ನು ಸಂಪರ್ಕಿಸಬೇಕು ಎಂದು ಹೇಳಿತ್ತು.
ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದ ಚಿದಂಬರಂ ಕೇಸಿನಲ್ಲಿ ತಮ್ಮ ಹೆಸರು ಇಲ್ಲದಿದ್ದರೂ ಕೂಡ ತಮಗೆ ಕಿರುಕುಳ ನೀಡಲಾಗುತ್ತಿದೆ ಎಂದು ವಾದಿಸಿದ್ದರು. ಐಎನ್ ಎಕ್ಸ್ ಮೀಡಿಯಾ ಕೇಸಿನಲ್ಲಿ ಮೊದಲು ಹೈಕೋರ್ಟ್ ನ್ನು ಸಂಪರ್ಕಿಸುವ ಬದಲು ಜಾರಿ ನಿರ್ದೇಶನಾಲಯದ ಏರ್ ಸೆಲ್ -ಮ್ಯಾಕ್ಸಿಸ್ ಕೇಸಿನಲ್ಲಿ ಬಂಧನದಿಂದ ರಕ್ಷಣೆ ನೀಡುವಂತೆ ಕೋರಿ ವಿಚಾರಣಾ ನ್ಯಾಯಾಲಯವನ್ನು ಕಳೆದ ತಿಂಗಳು 30ರಂದು ಚಿದಂಬರಂ ಸಂಪರ್ಕಿಸಿದ್ದರು.
ಸುಮಾರು 3,500 ಕೋಟಿ ರೂಪಾಯಿಗಳ ಏರ್ ಸೆಲ್ -ಮ್ಯಾಕ್ಸಿಸ್ ಒಪ್ಪಂದ ಮತ್ತು 305 ಕೋಟಿ ರೂಪಾಯಿಗಳ ಅಕ್ರಮ ಐಎನ್ಎಕ್ಸ್ ಮೀಡಿಯಾ ಕೇಸಿನಲ್ಲಿ ಚಿದಂಬರಂ ಪಾತ್ರವಿದೆ ಎಂದು ಆರೋಪಿಸಲಾಗಿದೆ. ಯುಪಿಎ-1 ಸರ್ಕಾರದ ಅವಧಿಯಲ್ಲಿ ಹಣಕಾಸು ಸಚಿವರಾಗಿದ್ದ ಚಿದಂಬರಂ ವಿದೇಶಿ ಹೂಡಿಕೆ ಪ್ರಚಾರ ಮಂಡಳಿ(ಎಫ್ಐಪಿಬಿ) ಅನುಮತಿಯನ್ನು ಈ ಎರಡು ಕಂಪೆನಿಗಳಿಗೆ ನಿಯಮ ಉಲ್ಲಂಘಿಸಿ ನೀಡಿದ್ದರು ಎಂಬ ಆರೋಪ ಕೇಳಿಬರುತ್ತಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಅವರನ್ನು ಸಹ ಕಳೆದ ಫೆಬ್ರವರಿ 28ರಂದು ಬಂಧಿಸಲಾಗಿತ್ತು. ನಂತರ ಮಾರ್ಚ್ 23ರಂದು ಅವರು ಜಾಮೀನಿನ ಮೇಲೆ ಹೊರಬಂದಿದ್ದರು. 
SCROLL FOR NEXT