ನವದೆಹಲಿ: ಬುರಾರಿಯಲ್ಲಿ ನಡೆದಿದ್ದ ಕುಟುಂಬವೊಂದರ 11 ಮಂದಿ ನಿಗೂಢ ಸಾಮೂಹಿಕ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ಕುಟುಂಬ ಅನುಸರಿಸಿದ ಆಚರಣೆಯೇ ಸಾಮೂಹಿಕ ಆತ್ಮಹತ್ಯೆಗೆ ಕಾರಣ ಎಂದು ಹೇಳಿದ್ದಾರೆ.
ಕೇಂದ್ರ ಅಪರಾಧ ವಿಭಾಗ ಈ ಪ್ರಕರಣದ ವರದಿಯನ್ನು ದೆಹಲಿ ಪೊಲೀಸ್ ಆಯುಕ್ತರಾದ ಅಮೂಲ್ಯ ಪಟ್ನಾಯಕ್ ಅವರಿಗೆ ನೀಡಲಿದೆ. ನಂತರ ಗೃಹ ಸಚಿವಾಲಯಕ್ಕೆ ಅಂತಿಮ ವರದಿಯನ್ನು ಸಲ್ಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜುಲೈ 1 ರಂದು ಎರಡು ಅಂತಸ್ತಿನ ಮನೆಯಿಂದ ಏಳು ಮಹಿಳೆಯರು ಹಾಗೂ ನಾಲ್ಕು ಪುರುಷರ ಮೃತದೇಹಗಳನ್ನು ಹೊರತೆಗೆಯಲಾಗಿತ್ತು. ಕಣ್ಣುಗಳಿಗೆ ಬಟ್ಟೆ ಕಟ್ಟಿಕೊಂಡು ನೇಣು ಹಾಕಿಕೊಂಡಿದ್ದರು. ಮನೆಯ ಹಿರಿಯ ಭಾಟಿಯಾ ಹಾಗೂ ನಾರಾಯಣಿ ದೇವಿ ನೇಣು ಬಿಗಿದುಕೊಂಡು ಮೃತಪಟ್ಟಿರುವುದು ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿದೆ.
ಭಾಟಿಯಾ ಮನೆಯ ಎದುರುಗಡೆಯ ಆವರಣದಲ್ಲಿನ ಸಿಸಿಟಿವಿ ದೃಶ್ಯಗಳು ತನಿಖೆಗೆ ನೆರವಾಗುವುದರ ಜೊತೆಗೆ ಸಾಮೂಹಿಕ ಆತ್ಮಹತ್ಯೆ ಎಂಬುದು ಅರಿಯುವಂತಾಯಿತು ಎಂದು ಅಪರಾಧ ವಿಭಾಗದ ಮುಖ್ಯ ಜಂಟಿ ಆಯುಕ್ತ ಅಲೋಕ್ ಕುಮಾರ್ ಹೇಳಿದ್ದಾರೆ.
ಸಿಸಿಟಿವಿಯಲ್ಲಿ ಏನಿದೆ : ಕುಟುಂಬ ಸದಸ್ಯರೊಬ್ಬರು ಐದು ಸ್ಟೂಲ್ ತರುವುದು , ಮತ್ತೊಬ್ಬರು ಪ್ಲೈವುಡ್ ನಿಂದ ಕೇಬಲ್ ತಂದಿದ್ದಾರೆ. 11 ಮಂದಿ ಆತ್ಮಹತ್ಯೆ ಮಾಡಿಕೊಂಡು ಸ್ಥಳದಲ್ಲಿ ಈ ವಸ್ತುಗಳು ದೊರೆತಿದ್ದವು ಎಂದು ಅವರು ತಿಳಿಸಿದ್ದಾರೆ.