ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮತ್ತೆ ಮಹಾಮೈತ್ರಿಗೆ ಮರಳುವ ಸಾಧ್ಯತೆ ಇದೆ ಎಂಬ ವದಂತಿಗಳ ಬೆನ್ನಲ್ಲೇ, ನಿತೀಶ್ ಕುಮಾರ್ ಅವರು ರಾಜಕೀಯ ನಿವೃತ್ತಿ ಘೋಷಿಸಿದರೆ ಮಾತ್ರ ಜೆಡಿಯುಗೆ ಆರ್ ಜೆಡಿ ಬೆಂಬಲ ನೀಡುವ ಕುರಿತು ಯೋಚಿಸಲಾಗುವುದು ಎಂದು ಪ್ರತಿಪಕ್ಷ ನಾಯಕ ತೇಜಸ್ವಿ ಯಾದವ್ ಅವರು ಗುರುವಾರ ಹೇಳಿದ್ದಾರೆ.
ಆರ್ ಜೆಡಿಯ 22ನೇ ಸಂಸ್ಥಾಪನಾ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದ ಬಿಹಾರ ಮಾಜಿ ಉಪ ಮುಖ್ಯಮಂತ್ರಿ, ಒಂದು ವೇಳೆ ನಿತೀಶ್ ಕುಮಾರ್ ಅವರು ಬಿಜೆಪಿ ಜೊತೆ ಮೈತ್ರಿ ಮುರಿದುಕೊಂಡು ಸಕ್ರಿಯ ರಾಜಕಾರಣದಿಂದ ನಿವೃತ್ತಿ ಪಡೆದರೆ ಮಾತ್ರ ಮರು ಮೈತ್ರಿ ಬಗ್ಗೆ ಚಿಂತಿಸಲಾಗುವುದು ಎಂದರು.
ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮತ್ತು 2020ರ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ನಿತೀಶ್ ಕುಮಾರ್ ಅವರು ಮಹಾಮೈತ್ರಿ ಸೇರಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಅಲ್ಲದೆ 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಮಹಾಮೈತ್ರಿ ಜತೆ ಕೈಜೋಡಿಸುವ ಅಗತ್ಯತೆ ಬಗ್ಗೆ ಕೆಲ ಕಾಂಗ್ರೆಸ್ ನಾಯಕರು ಬಿಹಾರ ಸಿಎಂಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ ಎಂದರು.
ಆದರೆ ಬಿಜೆಪಿ ಸೋಲಿಸಲು ನಮಗೆ ನಿತೀಶ್ ಕುಮಾರ್ ಅಗತ್ಯತೆ ಇಲ್ಲ ಎಂದು ನಾನು ಸ್ಪಷ್ಟಪಡಿಸುತ್ತಿದ್ದೇನೆ. ಆರ್ ಜೆಡಿಯೇ ಬಿಜೆಪಿ ಮತ್ತು ನಿತೀಶ್ ಕುಮಾರ್ ಇಬ್ಬರನ್ನೂ ಅಧಿಕಾರದಿಂದ ಕಿತ್ತುಹಾಕಲಿದೆ ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics