ಮಾನವ ಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಆರ್ ಸುಬ್ರಮಣ್ಯಂ
ನವದೆಹಲಿ: ಇನ್ನೂ ಅಸ್ಥಿತ್ವಕ್ಕೇ ಬಾರದ ಜಿಯೋ ಶಿಕ್ಷಣ ಸಂಸ್ಥೆಗೆ ಶ್ರೇಷ್ಠತೆ ಸ್ಥಾನಮಾನ ನೀಡಿದ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಈ ಬಗ್ಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಸ್ಪಷ್ಟನೆ ನೀಡಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿರುವ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಆ ಸುಬ್ರಮಣ್ಯಂ ಅವರು, ಗ್ರೀನ್ ಫೀಲ್ಡ್ ಕೆಟಗರಿ ಅಡಿಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ ಎಂದು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ತಮ್ಮ ಶಿಕ್ಷಣ ಸಂಸ್ಥೆಗಳನ್ನು ಹೇಗೆ ಶ್ರೇಷ್ಟ ಶಿಕ್ಷಣ ಸಂಸ್ಥೆಗಳನ್ನಾಗಿ ಮಾಡುತ್ತಾರೆ ಎಂಬ ದೂರದೃಷ್ಟಿ ಯೋಜನೆಗಳನ್ನು ಪರಿಗಣಿಸಿ ಕೇಂದ್ರ ಸರ್ಕಾರ ಶ್ರೇಷ್ಟತೆಯ ಸ್ಥಾನಮಾನ ನೀಡಿದೆ. ಆದರೆ ಈ ಯೋಜನೆಯಿಂದಾಗಿ ಆ ಸ್ಥಾನಮಾನ ಹೊಂದಿದೆ ಶಿಕ್ಷಣ ಸಂಸ್ಥೆಗಳಿಗೆ ಯಾವುದೇ ರೀತಿಯ ಆರ್ಥಿಕ ನೆರವು ಸಿಗುವುದಿಲ್ಲ ಎಂದು ಹೇಳಿದ್ದಾರೆ.
ಆರ್ಥಿಕ ನೆರವು ಸಿಗದೇ ಹೋದರೂ ಇಂತಹ ಶಿಕ್ಷಣ ಸಂಸ್ಥೆಗಳಿಗೆ ಸ್ವಾಯತ್ತತೆ ಸಿಗುತ್ತದೆ ಅಲ್ಲದೆ ಸರ್ಕಾರದ ನೀತಿಗಳಿಂದ ಕೊಂಚ ವಿನಾಯಿತಿ ಮಾತ್ರ ಸಿಗುತ್ತದೆ. ಆಯಾ ಶಿಕ್ಷಣ ಸಂಸ್ಥೆಗಳು ಇಲಾಖೆಗೆ ನೀಡಿರುವ ವಿಷನ್ ಡಾಕ್ಯುಮೆಂಟ್ ಆಧಾರದ ಮೇರೆಗೆ ಶ್ರೇಷ್ಠತೆ ಸ್ಥಾನಮಾನಕ್ಕೆ ಆಯ್ಕೆ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇನ್ನು ಸೋಮವಾರವಷ್ಟೇ ಇಲಾಖೆ ಮೂರು ಖಾಸಗಿ ಮತ್ತು ಮೂರು ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಶ್ರೇಷ್ಠ ಶಿಕ್ಷಣ ಸಂಸ್ಥೆಗಳ ಪಟ್ಟಿಗೆ ಸೇರಿಸಿ ಪ್ರಕಟಣೆ ನೀಡಿತ್ತು. ಅಚ್ಚರಿ ಎಂದರೆ ದೇಶದ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳಾದ ಮದ್ರಾಸ್ ಐಐಟಿ ಮತ್ತು ಐಐಟಿ ಖರಗ್ ಪುರಕ್ಕ ಪಟ್ಟಿಯಲ್ಲಿ ಸ್ಥಾನ ನೀಡಿಲ್ಲ. ಆದರೆ ಇನ್ನೂ ಅಸ್ತಿತ್ವಕ್ಕೇ ಬಾರದ ಜಿಯೋ ಶಿಕ್ಷಣ ಸಂಸ್ಥೆಯನ್ನು ಶ್ರೇಷ್ಠ ಶಿಕ್ಷಣ ಸಂಸ್ಥೆ ಎಂದು ಪಟ್ಟಿಯಲ್ಲಿ ಪ್ರಕಟಿಸಲಾಗಿತ್ತು. ಈ ಬಗ್ಗೆ ವ್ಯಾಪಕ ಆಕ್ರೋಶ ಕೂಡ ವ್ಯಕ್ತವಾಗಿತ್ತು.