ದೇಶ

5 ರು. ಗೆ ಊಟ, ತಿಂಡಿ ನೀಡುವ 'ಅಣ್ಣಾ ಕ್ಯಾಂಟೀನ್' ಉದ್ಘಾಟಿಸಿದ ಆಂಧ್ರ ಸಿಎಂ

Lingaraj Badiger
ವಿಜಯವಾಡ: ತಮಿಳುನಾಡಿನಲ್ಲಿ ಅಮ್ಮ ಕ್ಯಾಂಟೀನ್, ಕರ್ನಾಟಕದಲ್ಲಿ ಇಂದಿರಾ ಕ್ಯಾಂಟೀನ್​ ನಂತರ ಈಗ ಆಂಧ್ರಪ್ರದೇಶದಲ್ಲಿ ಕಡಿಮೆ ದರದಲ್ಲಿ ಆಹಾರ ಪೂರೈಸುವ 'ಅಣ್ಣಾ ಕ್ಯಾಂಟೀನ್'​ಗೆ ಬುಧವಾರ ಮುಖ್ಯಮಂತ್ರಿ ಎನ್​. ಚಂದ್ರಬಾಬು ನಾಯ್ಡು ಅವರು ಚಾಲನೆ ನೀಡಿದ್ದಾರೆ.
ಚಂದ್ರಬಾಬು ನಾಯ್ಡು ಅವರು ಇಂದು ವಿಜಯವಾಡದ ಭವಾನಿಪುರದಲ್ಲಿ ಅಣ್ಣಾ ಕ್ಯಾಂಟೀನ್ ಉದ್ಘಾಟಿಸಿದರು.
ವಿಜಯವಾಡದಲ್ಲಿ ಒಟ್ಟು 60 ಅಣ್ಣಾ ಕ್ಯಾಂಟೀನ್ ಗೆ ಇಂದು ಚಾಲನೆ ನೀಡಲಾಗಿದ್ದು, ರಾಜ್ಯಾದ್ಯಂತ 203 ಕ್ಯಾಂಟೀನ್ ಸ್ಥಾಪಿಸುವ ಗುರಿ ಇದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ನೂತನವಾಗಿ ಉದ್ಘಾಟನೆಯಾಗಿರುವ ಈ ಕ್ಯಾಂಟೀನ್​ಗಳಲ್ಲಿ ಐದು ರೂಪಾಯಿಗಳಿಗೆ ಉಪಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿ ಊಟ ನೀಡಲಾಗುತ್ತದೆ. ಮೂರು ಇಡ್ಲಿ/ ಮೂರು ಪೂರಿ/ ಉಪ್ಪಿಟ್ಟು / ಪೊಂಗಲ್​ ಅನ್ನು ಉಪಹಾರವಾಗಿ ನೀಡಿದರೆ, ಭೋಜನವಾಗಿ ಅನ್ನ ಸಾಂಬಾರ್​, ದಾಲ್​, ಉಪ್ಪಿನಕಾಯಿ, ಕರ್ರಿ ಮತ್ತು ಮೊಸರು ನೀಡಲಾಗುತ್ತಿದ್ದು, ಎಲ್ಲದ್ದಕ್ಕೂ ಒಂದೇ ದರ ನಿಗದಿಪಡಿಸಲಾಗಿದೆ.
ಬಡವರು ಕೇವಲ 15 ರುಪಾಯಿಗಳಲ್ಲಿ ದಿನದ ಮೂರು ಹೊತ್ತಿನ ಆಹಾರ ಪಡೆಯಬೇಕು ಎಂಬುದೇ ಈ ಕಾರ್ಯಕ್ರಮದ ಹಿಂದಿನ ಉದ್ದೇಶ ಎಂದು ಆಂಧ್ರಪ್ರದೇಶ ಸಚಿವ ಪಿ ನಾರಾಯಣ ಅವರು ತಿಳಿಸಿದ್ದಾರೆ.
ಯೋಜನೆಯ ಉಸ್ತುವಾರಿಯನ್ನು ಅಕ್ಷಯ ಪಾತ್ರ ಪ್ರತಿಷ್ಠಾನಕ್ಕೆ ನೀಡಲಾಗಿದೆ. ನಿತ್ಯ 2 ಲಕ್ಷ ಮಂದಿಗೆ ಆಹಾರ ಪೂರೈಸುವ ಉದ್ದೇಶವನ್ನು ಈ ಕಾರ್ಯಕ್ರಮ ಹೊಂದಿದೆ.
SCROLL FOR NEXT