ದೇಶ

ಗೋ ರಕ್ಷಕರು ಪ್ರಧಾನಿ ಮೋದಿ ಮಾತು ಕೇಳದೇ ಇರುವುದು ಆತಂಕಕಾರಿ: ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ

Srinivas Rao BV
ನವದೆಹಲಿ: ದೇಶಾದ್ಯಂತ ಗೋರಕ್ಷಣೆಗಾಗಿ ಕಾನೂನನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು, ಈ ರೀತಿ ಮಾಡುವ ಗೋರಕ್ಷಕರು ಪ್ರಧಾನಿ ನರೇಂದ್ರ ಮೋದಿ ಅವರ ಮಾತಿಗೂ ಓಗೊಡದೇ ಇರುವುದು ಆತಂಕಕಾರಿ ಬೆಳವಣಿಗೆ ಎಂದು ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಆತಂಕ ವ್ಯಕ್ತಪಡಿಸಿದ್ದಾರೆ. 
ಮೋದಿ ಬಲಿಷ್ಠ ನಾಯಕ, ಬಿಜೆಪಿಯಲ್ಲಿ ಅವರು ಪ್ರಶ್ನಾತೀತ ನಾಯಕ. ಆದರೆ ಪ್ರಧಾನಿಯ ಮಾತನ್ನು ಅವರ ಅನುಯಾಯಿಗಳೇ ಕೇಳದೇ ಇದ್ದಲ್ಲಿ ಅದು ಆತಂಕಕಾರಿ ಬೆಳವಣಿಗೆ. ಅವರ ವರ್ಚಸ್ಸನ್ನು ಅವರ ಅನುಯಾಯಿಗಳೇ ಕುಗ್ಗಿಸುತ್ತಿದ್ದಾರೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ ಹಾಗಂತ ಇದೇ ಅಂತಿಮ ಎಂದೂ ಹೇಳುತ್ತಿಲ್ಲ ಎಂದು ಅನ್ಸಾರಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಹಮೀದ್ ಅನ್ಸಾರಿ ಅವರ ಭಾಷಣಗಳ ಸಂಗ್ರಹವಾದ "ಡೇರ್ ಐ ಕ್ವೆಶ್ಚನ್" ಪುಸ್ತಕ ಬಿಡುಗಡೆಗೂ ಮುನ್ನ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು  "ಭಾರತದ ರಾಷ್ಟ್ರೀಯತೆ, ಬಹುತ್ವ, ಜಾತ್ಯಾತೀತತೆ ಸೇರಿದಂತೆ ಹಲವು ಅಂಶಗಳ ಬಗ್ಗೆ ಉಲ್ಲೇಖಿಸಿದ್ದೇನೆ" ಎಂದು ಹೇಳಿದ್ದಾರೆ.
ತಮ್ಮ ಬೀಳ್ಕೊಡುಗೆ ಸಮಾರಂಭದಲ್ಲಿ ಮುಸ್ಲಿಮರ ಅಭದ್ರತೆ ಕುರಿತು ಅನ್ಸಾರಿ ನೀಡಿದ್ದ ಹೇಳಿಕೆ ಚರ್ಚೆಗೆ ಗ್ರಾಸವಾಗಿತ್ತು. ಈ ಬಗ್ಗೆಯೂ ಸ್ಪಷ್ಟನೆ ನೀಡಿರುವ ಅನ್ಸಾರಿ, ಸಮಾಜದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂಬುದು ಸತ್ಯ, ಆದರೆ ನರೇಂದ್ರ ಮೋದಿ ಪ್ರಧಾನಿಯಾದಾಗಿನಿಂದ ಮಾತ್ರ ಅಸಹಿಷ್ಣುತೆ ಹೆಚ್ಚುತ್ತಿದೆ ಎನ್ನುವುದಕ್ಕೆ ಸಾಧ್ಯವಿಲ್ಲ. ಈ ಹಿಂದಿನಿಂದಲೂ ಅಸಹಿಷ್ಣುತೆ ಇದೆ ಎಂದು ಹೇಳಿದ್ದಾರೆ. 
SCROLL FOR NEXT