ಪ್ರಧಾನಮಂತ್ರಿ ನರೇಂದ್ರ ಮೋದಿ
ನವದೆಹಲಿ: 2004 ರಿಂದ 2014ರವರೆಗೂ ಕೇಂದ್ರದಲ್ಲಿ ಅಧಿಕಾರ ನಡೆಸಿದ್ದ ಯುಪಿಎ ಸರ್ಕಾರ ಜನತೆಗೆ ನೀಡಲಾಗಿದ್ದ ವಿದ್ಯುತ್ ಭರವಸೆ ಈಡೇರಿಸುವಲ್ಲಿ ವಿಫಲವಾಗಿತ್ತು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗುರುವಾರ ಹೇಳಿದ್ದಾರೆ.
ದೇಶದ ಲಕ್ಷಾಂತರ ಗ್ರಾಮಸ್ಥರನ್ನು ಕುರಿತು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿರುವ ಅವರು, 2009ರೊಳಗೆ ಪ್ರತೀ ಗ್ರಾಮಕ್ಕೆ ವಿದ್ಯುತ್ ಸೌಲಭ್ಯ ಒದಗಿಸುವುದಾಗಿ ಕಾಂಗ್ರೆಸ್ ಸರ್ಕಾರ 2005ರಲ್ಲಿ ಭರವಸೆಗಳನ್ನು ನೀಡಿತ್ತು. ನಂತರ ಆಡಳಿತಾರೂಢ ಪಕ್ಷದ ರಾಷ್ಟ್ರಪತಿಗಳು ಪ್ರತೀ ಮನೆಗೂ ವಿದ್ಯುತ್ ಸೌಲಭ್ಯ ಒದಗಿಸುವ ಭರವಸೆಯನ್ನು ನೀಡಿದ್ದರು. ಅವರು ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಇಂತಹ ಯಾವುದೇ ಭರವಸೆಗಳೂ ಈಡೇರಲೇ ಇಲ್ಲ ಎಂದು ಹೇಳಿದ್ದಾರೆ.
ದುರಾದೃಷ್ಚಕರ ಸಂಗತಿ ಎಂದರೆ, ಸ್ವಾತಂತ್ರ್ಯ ಬಂದು ಹಲವು ವರ್ಷಗಳು ಕಳೆದರೂ, ದೇಶದಲ್ಲಿರುವ ಹಲವು ಗ್ರಾಮಗಳು ಕತ್ತಲಲ್ಲಿಯೇ ಕಾಲ ಕಳೆಯುವಂತಾಗಿತ್ತು. ನಮಗೆ ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದಿದ್ದು, 18 ಸಾವಿರ ಗ್ರಾಮಗಳು ವಿದ್ಯುತ್ ಸಂಪರ್ಕ ಹೊಂದಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್'ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಹಲವು ವಿದ್ಯುತ್ ಯೋಜನೆಗಳನ್ನು ಕೈಗೊಳ್ಳಲಾಯಿತು. ಟೌನ್'ಗಳು ಹಾಗೂ ಗ್ರಾಮಗಳಿಗೆ ವಿದ್ಯುತ್ ಸೌಲಭ್ಯಗಳನ್ನು ನೀಡಲಾಯಿತು. ಕೇವಲ ವಿದ್ಯುತ್ ಸಂಪರ್ಕವಷ್ಟೇ ಅಲ್ಲದೆ, ಭಾರತ ಸರ್ಕಾರ ಹಲವು ವ್ಯವಸ್ಥೆಗಳ ಕಾರ್ಯವೈಖರಿಗಳನ್ನು ಸುಧಾರಣೆ ಮಾಡಲಾಯಿತು ಎಂದು ತಿಳಿಸಿದ್ದಾರೆ.