ರಾಹುಲ್ ಗಾಂಧಿ - ತೇಜಸ್ವಿ ಯಾದವ್
ಪಾಟ್ನಾ: ಪ್ರತಿಪಕ್ಷಗಳ ಪ್ರಧಾನಿ ಅಭ್ಯರ್ಥಿ ರೇಸ್ ನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಾತ್ರವಲ್ಲದೆ ಇತರೆ ನಾಯಕರು ರೇಸ್ ನಲ್ಲಿದ್ದಾರೆ ಎಂದು ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಆರ್ ಜೆಡಿ ಮುಖಂಡ ತೇಜಸ್ವಿ ಯಾದವ್ ಅವರು ಮಂಗಳವಾರ ಹೇಳಿದ್ದಾರೆ.
ಪ್ರತಿಪಕ್ಷಗಳೆಲ್ಲವೂ ಒಂದೆಡೆ ಕುಳಿತು ತಮ್ಮ ಪ್ರಧಾನಿ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳಲಿವೆ. ಪ್ರಧಾನಿ ಅಭ್ಯರ್ಥಿಯ ರೇಸ್ ನಲ್ಲಿ ರಾಹುಲ್ ಗಾಂಧಿ ಮಾತ್ರವಲ್ಲ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್, ಬಿಎಸ್ ಸಿಪಿ ನಾಯಕಿ ಮಾಯಾವತಿ ಅವರೂ ಇದ್ದಾರೆ ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ.
ಇದೇ ವೇಳೆ, ಮೈತ್ರಿ ಕೂಟದಿಂದ ಯಾರೇ ಪ್ರಧಾನಮಂತ್ರಿ ಅಭ್ಯರ್ಥಿಯಾದರೂ ಅವರಿಗೆ ಆರ್ ಜೆಡಿಯ ಸಂಪೂರ್ಣ ಬೆಂಬಲ ಇರಲಿದೆ ಎಂದು ತೇಜಸ್ವಿ ಸ್ಪಷ್ಟಪಡಿಸಿದ್ದಾರೆ.
ಸಂವಿಧಾನವನ್ನು ರಕ್ಷಣೆ ಮಾಡುವ ನಾಯಕನನ್ನು ಬೆಂಬಲಿಸುವುದು ನಮ್ಮ ಉದ್ದೇಶವಾಗಿದೆ. ಅದು ರಾಹುಲ್ ಗಾಂಧಿ ಅವರೂ ಆಗಿರಬಹುದು. ಆದರೆ, ರಾಹುಲ್ ಗಾಂಧಿ ಅವರು ಬಿಜೆಪಿಯೇತರ ಪಕ್ಷಗಳನ್ನು ಸಂಘಟಿಸಿ, ಮಹಾಮೈತ್ರಿ ಕೂಟದ ವೇದಿಕೆಗೆ ಕರೆತರಬೇಕಿದೆ ಎಂದು ತೇಜಸ್ವಿ ಹೇಳಿದ್ದಾರೆ.
ಆರ್ ಜೆಡಿ ಕಾಂಗ್ರೆಸ್ ನ ಪ್ರಮುಖ ಮಿತ್ರ ಪಕ್ಷವಾಗಿದ್ದು, ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಹಾಗೂ ತೇಜಸ್ವಿ ಯಾದವ್ ಅವರು ಸದಾ ರಾಹುಲ್ ಗಾಂಧಿಯನ್ನು ಬೆಂಬಲಿಸಿದ್ದಾರೆ.