ನವದೆಹಲಿ: ವಿಶ್ವವಿಖ್ಯಾತ ಪ್ರಪಂಚದ ಅದ್ಬುತಗಳಲ್ಲಿ ಒಂದಾದ ತಾಜ್ ಮಹಲ್ ಸಂರಕ್ಷಣೆ ಕುರಿತು ಉತ್ತರ ಪ್ರದೇಶ ಸರ್ಕಾರ ತನ್ನ ವಿಷನ್ ಡಾಕ್ಯುಮೆಂಟ್ (ದೂರದೃಷ್ಟಿ ಯೋಜನೆಗಳ ನೀಲನಕ್ಷೆ) ಅನ್ನು ಸುಪ್ರೀಂ ಕೋರ್ಟ್ ಗೆ ಸಲ್ಲಿಕೆ ಮಾಡಿದೆ.
ತಾಜ್ ಮಹಲ್ ಸಂರಕ್ಷಣೆಗೆ ಸರ್ಕಾರ ಕೈಗೊಳ್ಳಬಹುದಾದ ಮತ್ತು ಈಗಾಗಲೇ ಕೈಗೊಂಡಿರುವ ಕೆಲ ಮಹತ್ವಗದ ಕ್ರಮಗಳನ್ನು ಉತ್ತರ ಪ್ರದೇಶ ಸರ್ಕಾರ ತನ್ನ ವಿಷನ್ ಡಾಕ್ಯುಮೆಂಟ್ ನಲ್ಲಿ ನಮೂದು ಮಾಡಿದೆ. ದೆಹಲಿ ಮೂಲದ ಯೋಜನೆ ಮತ್ತು ಆರ್ಕಿಟೆಕ್ಚರ್ ಶಾಲೆ ಈ ವಿಷನ್ ಡಾಕ್ಯುಮೆಂಟ್ ಸಿದ್ಧಪಡಿಸಿದೆ ಎಂದು ತಿಳಿದುಬಂದಿದೆ.
ತಾಜ್ ಮಹಲ್ ರಕ್ಷಣೆ ಕುರಿತು ಪರಿಸರ ಹೋರಾಟಗಾರ ಎಂಸಿ ಮೆಹ್ತಾ ಎಂಬುವವರು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ ಉತ್ತರ ಪ್ರದೇಶ ಸರ್ಕಾರವನ್ನು ತೀವರ್ ತರಾಟೆಗೆ ತೆಗೆದುಕೊಂಡಿತ್ತು. ಅಲ್ಲದೆ ಐತಿಹಾಸಿಕ ಕಟ್ಟಡದ ಸಂರಕ್ಷಣೆಗೆ ವಿಷನ್ ಡಾಕ್ಯುಮೆಂಟ್ ಸಲ್ಲಿಕೆ ಮಾಡುವಂತೆ ಕೇಳಿತ್ತು.
ಅದರಂತೆ ಇಂದು ಉತ್ತರ ಪ್ರದೇಶ ಸರ್ಕಾರ ಸುಪ್ರೀಂ ಕೋರ್ಟ್ ಗೆ ತಾಜ್ ಮಹಲ್ ರಕ್ಷಣೆ ಕುರಿತ ದೂರದೃಷ್ಟಿ ಯೋಜನೆಗಳ ನೀಲನಕ್ಷೆ ಸಿದ್ಧಪಡಿಸಿ ಸಲ್ಲಿಕೆ ಮಾಡಿದೆ.
ಸರ್ಕಾರ ಸಲ್ಲಿಕೆ ಮಾಡಿರುವ ನೀಲನಕ್ಷೆಯಲ್ಲಿ ಹಲವು ವಿಚಾರಗಳನ್ನು ಪ್ರಸ್ತಾಪಿಸಲಾಗಿದ್ದು, ಪ್ರಮುಖವಾಗಿ ತಾಜ್ ಮಹಲ್ ಮತ್ತು ಅದರ ಸುತ್ತಮುತ್ತಲ ಪ್ರದೇಶವನ್ನು ಪ್ಲಾಸ್ಟಿಕ್ ಮುಕ್ತವಾಗಿಸುವುದು. ಪ್ಲಾಸ್ಟಿಕ್ ಕವರ್ ಗಳು ಮಾತ್ರವಲ್ಲದೇ ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲಿಗಳನ್ನೂ ಸರ್ಕಾರ ನಿಷೇಧಿಸುವುದಾಗಿ ಹೇಳಿದೆ.
ಇದಲ್ಲದೇ ತಾಜ್ ಮಹಲ್ ಸುತ್ತಮುತ್ತಲ ಪ್ರದೇಶದಲ್ಲಿನ ಸಂಚಾರ ದಟ್ಟಣೆಯನ್ನು ಕ್ರಮೇಣ ತಗ್ಗಿಸಿ ಪಾದಾಚಾರಿ ಮಾರ್ಗಗಳನ್ನು ರಚನೆ ಮಾಡಿ ಪಾದಾಚಾರಿಗಳನ್ನು ಉತ್ತೇಜಿಸಲು ನಿರ್ಧರಿಸಲಾಗಿದೆ. ಅಲ್ಲದೆ ಸಂಚಾರ ದಟ್ಟಣ ಕಡಿಮೆ ಇರುವ ಪ್ರದೇಶಗಳಲ್ಲಿ ವಾಹನ ಸಂಚಾರ ಸಂಪೂರ್ಣ ನಿಷೇಧಿಸಲೂ ಕ್ರಮಕೈಗೊಳ್ಳಲಾಗುತ್ತದೆ. ಪ್ರಮುಖವಾಗಿ ತಾಜ್ ಮಹಲ್ ಇರುವ ಆಗ್ರಾದ ಯಮುನಾ ನದಿ ತೀರ ಪ್ರದೇಶದುದ್ದಕ್ಕೂ ಪಾದಾಚಾರಿ ಮಾರ್ಗಗಳನ್ನು ರಚಿಸಿ ಪಾದಾಚಾರಿಗಳಿಗೆ ಅನುಕೂಲಕ ವಾತಾವರಣ ನಿರ್ಮಾಣ ಮಾಡಿಕೊಡಲಾಗುತ್ತದೆ.
ಅಲ್ಲದೆ ಯಾವುದೇ ಕಾರಣಕ್ಕೂ ಯಮುನಾ ನದಿ ತೀರದಲ್ಲಿ ಪ್ರದೇಶಗಳಲ್ಲಿ ಯಾವುದೇ ರೀತಿಯ ಕಟ್ಟಡ ಕಾಮಗಾರಿ ನಡೆಸದಂತೆ ಎಚ್ಚರಿಕೆ ವಹಿಸಲಾಗುತ್ತದೆ. ಅಲ್ಲದೆ ಈ ಪ್ರದೇಶಗಳಲ್ಲಿ ನೈಸರ್ಗಿಕ ಸಸ್ಯಸಂಕುಲಗಳನ್ನು ಬೆಳೆಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದೆ.