ಎನ್'ಸಿಪಿ ಅಧ್ಯಕ್ಷ ಶರದ್ ಪವಾರ್
ಮುಂಬೈ: ಮರಾಠ ಸಮುದಾಯದ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಎನ್'ಸಿಪಿ ಅಧ್ಯಕ್ಷ ಶರದ್ ಪವಾರ್ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಬುಧವಾರ ಹೇಳಿದ್ದಾರೆ.
ಮೀಸಲಾತಿ ಆಗ್ರಹಿಸಿ ಮರಾಠ ಸಮುದಾಯ ಮಹಾರಾಷ್ಟ್ರ ರಾಜ್ಯದಲ್ಲಿ ಬಂದ್ ಆಚರಿಸುತ್ತಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಮಹಾರಾಷ್ಟ್ರ ಮುಖ್ಯಮಂತ್ರಿ ಹಾಗೂ ಅವರ ಸಂಪುಟದ ಸಚಿವರು ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುವ ಬದಲು ಮರಾಠಿಗರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಮಾತುಕತೆ ನಡೆಸಬೇಕು ಎಂದು ಹೇಳಿದ್ದಾರೆ.
ಮರಾಠ ಸಮುದಾಯದ ಮುಖ್ಯ ಪ್ರತಿನಿಧಿಗಳನ್ನು ಕರೆದು ಮುಖ್ಯಮಂತ್ರಿಗಳು ಮಾತುಕತೆ ನಡೆಸಿ, ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬೇಕು. ಮರಾಠಿಗರು ಈ ಹಿಂದೆ ಶಾಂತಿಯುತವಾಗಿಯೇ ಪ್ರತಿಭಟನೆ ನಡೆಸಿ, ತಮ್ಮ ಆಗ್ರಹಗಳನ್ನು ವ್ಯಕ್ತಪಡಿಸುತ್ತಿದ್ದರು. ಎಂದಿಗೂ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯುಂಟಾಗಿರಲಿಲ್ಲ. ಪ್ರತಿಭಟನಾಕಾರರು ಸಾರ್ವಜನಿಕ ಆಸ್ತಿ ಹಾಗೂ ಖಾಸಗಿ ಆಸ್ತಿಗಳಿಗೆ ಯಾವುದೇ ರೀತಿಯ ಹಾನಿಯುಂಟು ಮಾಡಬಾರದು ಪ್ರತಿಭಟನೆಯಿಂದ ಸಾಮಾನ್ಯ ಜನರು ಸಂಕಷ್ಟ ಎದುರಿಸುವಂತೆ ಮಾಡಬಾರದು ಎಂದು ತಿಳಿಸಿದ್ದಾರೆ.
ಉನ್ನತ ಶಿಕ್ಷಣ ಪಡೆದವರು, ಹಾಗೂ ಉತ್ತಮ ರೀತಿಯಲ್ಲಿರುವ ಮರಾಠಿಗರಿಗೆ ಮೀಸಲಾತಿ ನೀಡಬಾರದು. ಕೆಲ ಭಾಗದ ಸಮುದಾಯದವರಿಗೆ ಮಾತ್ರ ಮೀಸಲಾತಿಯ ಅಗತ್ಯವಿದೆ. ಆದರೆ, ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗದವರನ್ನು ತಿರಸ್ಕರಿಸಬಾರದು ಎಂದಿದ್ದಾರೆ.