ಉತ್ತರ ಪ್ರದೇಶ:ಗುಂಪು ಹಲ್ಲೆ ಪ್ರಕರಣಗಳಿಗೆ ಅನಗತ್ಯ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.ಮಾನವರಿಗೆ ಪ್ರಾಮುಖ್ಯತೆ ನೀಡಬೇಕು. ಆದರೆ, ಅದೇ ರೀತಿಯಲ್ಲಿ ಹಸುಗಳನ್ನು ಕಾಪಾಡಬೇಕಾದ ಅಗತ್ಯವಿದೆ ಎಂದಿದ್ದಾರೆ.
ಈ ಮಧ್ಯೆ ಗುಂಪು ಹಲ್ಲೆ ಪ್ರಕರಣಗಳನ್ನು ಕಾಂಗ್ರೆಸ್ ಉತ್ತೇಜಿಸುತ್ತಿದೆ ಎಂದು ಆರೋಪಿಸಿದ ಅವರು, 1984 ರಲ್ಲಿ ನಡೆದಿದ್ದ ಗುಂಪು ಹಲ್ಲೆ ಪ್ರಕರಣಗಳನ್ನು ಮಾತನಾಡುತ್ತೀರಾ ? ಎಂದು ಪ್ರಶ್ನಿಸಿದ್ದಾರೆ. ಕಾನೂನು ಮತ್ತು ರಕ್ಷಣೆ ವಿಚಾರ ರಾಜ್ಯಕ್ಕೆ ಸಂಬಂಧಿಸಿದ್ದಾಗಿದೆ. ಈ ವಿಚಾರದಲ್ಲಿ ಕಾಂಗ್ರೆಸ್ ಯಶಸ್ವಿಯಾಗುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಪ್ರತಿಯೊಬ್ಬರಿಗೂ ರಕ್ಷಣೆ ನೀಡುತ್ತೇವೆ. ಆದರೆ. ಇದು ಪ್ರತಿಯೊಬ್ಬರ ಜವಾಬ್ದಾರಿ ಕೂಡಾ ಆಗಿದೆ. ಪ್ರತಿಯೊಂದು ಧರ್ಮ, ಜಾತಿಯೂ ಇತರರ ಭಾವನೆಗಳಿಗೆ ಗೌರವ ನೀಡಬೇಕು. ಮನುಷ್ಯರು ಪ್ರಮುಖರಿರುವಂತೆ ಹಸುಗಳಿಗೂ ಕೂಡಾ ಪ್ರಾಮುಖ್ಯತೆ ನೀಡಬೇಕಾಗಿದೆ. ಪ್ರಕೃತಿಯಲ್ಲಿ ಎರಡು ತನ್ನದೇ ಆದ ಪಾತ್ರ ನಿರ್ವಹಿಸುತ್ತವೆ. ಅವುಗಳನ್ನು ಎಲ್ಲರೂ ಸಂರಕ್ಷಿಸಬೇಕಾಗಿದೆ ಎಂದು ಹೇಳಿದ್ದಾರೆ.
ಗುಂಪು ಹಲ್ಲೆಯಂತಹ ಅಪರಾಧಗಳಿಗೆ ವಿಶೇಷ ಕಾನೂನು ರೂಪಿಸುವಂತೆ ಸಂಸತ್ತಿಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ. ಪ್ರಜಾಪ್ರಭುತ್ವ ಕಗ್ಗೊಲೆಯಂತಹ ಹೇಯ ಕೃತ್ಯಗಳನ್ನು ಸಹಿಸಲು ಸಾಧ್ಯವಾಗಲ್ಲ ಎಂದಿದ್ದಾರೆ.