ಮುಂಬೈ: ಮರಾಠ ಸಮುದಾಯಕ್ಕೆ ಸರ್ಕಾರಿ ಉದ್ಯೋ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಕಲ್ಪಿಸಬೇಕು ಎಂದು ಒತ್ತಾಯಿಸಿ ಮಹಾರಾಷ್ಟ್ರದ ಹಲವು ಭಾಗದಲ್ಲಿ ಹಿಂಸಾತ್ಮಕ ಪ್ರತಿಭಟನೆ ನಡೆಯುತ್ತಿದ್ದು, ಮೀಸಲಾತಿ ಕುರಿತು ಚರ್ಚಿಸಲು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ನಾಳೆ ಸರ್ವಪಕ್ಷ ಸಭೆ ಕರೆಯಲು ನಿರ್ಧರಿಸಿದ್ದಾರೆ.
ನಿನ್ನೆ ರಾತ್ರಿ ಸಿಎಂ ಫಡ್ನವಿಸ್ ನೇತೃತ್ವದಲ್ಲಿ ತಮ್ಮ ಸಂಪುಟ ಸಹದ್ಯೋಗಿ ವಿನೋದ್ ತಾವ್ಡೆ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಬಿಜೆಪಿ ಸಚಿವರಾದ ಚಂದ್ರಕಾಂತ್ ಪಾಟೀಲ್, ಗಿರೀಶ್ ಮಹಾಜನ್, ಸುಭಾಶ್ ದೇಶಮೂಖ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ರಾವ್ ಸಾಹೇಬ್ ದಾನ್ವೆ ಅವರು ಸಭೆಯಲ್ಲಿ ಭಾಗವಹಿಸಿದ್ದರು.
ನಾಳೆ ವಿಧಾನ ಭವನದಲ್ಲಿ ನಡೆಯುವ ಸರ್ವಪಕ್ಷ ಸಭೆಗೆ ಇಂದು ಎಲ್ಲಾ ಪಕ್ಷದ ಮುಖಂಡರಿಗೆ ಆಹ್ವಾನ ಕಳುಹಿಸಲಾಗುತ್ತಿದ್ದು, ಮರಾಠ ಮೀಸಲಾತಿ ಬಗ್ಗೆ ಒಂದು ನಿರ್ಧಾರಕ್ಕೆ ಬರಲಾಗುವುದು ಎಂದು ಕಂದಾಯ ಸಚಿವ ಚಂದ್ರಕಾಂತ್ ಪಾಟೀಲ್ ಅವರು ತಿಳಿಸಿದ್ದಾರೆ.
ಮರಾಠ ಸಮುದಾಯಕ್ಕೆ ಮೀಸಲಾತಿ ನೀಡಲು ಬಿಜೆಪಿ ಸರ್ಕಾರ ಬದ್ಧವಾಗಿದೆ ಎಂದು ದಾನ್ವೆ ಅವರು ಹೇಳಿದ್ದಾರೆ.